ADVERTISEMENT

ಆಯೋಗವು ಬಿಹಾರ ಚುನಾವಣೆ ಬಗ್ಗೆ ರಾಜಕೀಯ ಪಕ್ಷಗಳೊಂದಿಗೆ ಚರ್ಚಿಸಲಿ: ಕಾಂಗ್ರೆಸ್

ಏಜೆನ್ಸೀಸ್
Published 9 ಆಗಸ್ಟ್ 2020, 11:33 IST
Last Updated 9 ಆಗಸ್ಟ್ 2020, 11:33 IST
ಕಾಂಗ್ರೆಸ್‌ ನಾಯಕ ಅಖಿಲೇಶ್‌ ಪ್ರಸಾದ್‌ ಸಿಂಗ್‌
ಕಾಂಗ್ರೆಸ್‌ ನಾಯಕ ಅಖಿಲೇಶ್‌ ಪ್ರಸಾದ್‌ ಸಿಂಗ್‌   

ನವದೆಹಲಿ: ಚುನಾವಣಾ ಆಯೋಗವು ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ಕಾಂಗ್ರೆಸ್‌ ನಾಯಕ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯರಾಗಿರುವ ಸಿಂಗ್, ‘ಕೋವಿಡ್‌–19 ವಿರುದ್ಧ ಹೋರಾಡುವುದು ಅತ್ಯಂತ ಅಗತ್ಯವಾದದ್ದಾಗಿದೆ. ಬಿಹಾರ ಚುನಾವಣೆಯ ಬಗ್ಗೆ ನಿರ್ಧಾರ ಕೈಗೊಳ್ಳುವುದು ಯಾವುದೇ ಒಂದು ರಾಜಕೀಯ ಪಕ್ಷದ ಜವಾಬ್ದಾರಿಯಲ್ಲ. ನನ್ನ ಪ್ರಕಾರ, ಚುನಾವಣಾ ಆಯೋಗವು ಎಲ್ಲ ಪಕ್ಷಗಳ ಜೊತೆ ಚರ್ಚಿಸಿದ ನಂತರವೇ ಬಿಹಾರ ಚುನಾವಣೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ಕೊರೊನಾವೈರಸ್‌ ಭೀತಿಯ ನಡುವೆಯೂ ನಿತೀಶ್‌ ಕುಮಾರ್‌ ಅವರ ಪಕ್ಷವು ಚುನಾವಣೆ ಎದುರಿಸಲು ಸಜ್ಜಾಗಿದೆ ಎಂದು ಕಿಡಿಕಾರಿದ್ದಾರೆ.

ADVERTISEMENT

‘ನಿತೀಶ್ ಕುಮಾರ್‌ ಅವರು ಸೂಕ್ಷ್ಮತೆಯೇ ಇಲ್ಲದಂತಾಗಿದ್ದಾರೆ. ಅವರ ಸಂವೇದನೆ ಸತ್ತಿದೆ. ಬಿಹಾರ ಜನರ ಮುಂದೆ ಎರಡು ಆಯ್ಕೆಗಳಿವೆ. ಒಂದು ಸಾವು ಮತ್ತು ಎರಡನೆಯದ್ದು ಮತ ಚಲಾಯಿಸುವುದು. ಖಂಡಿತವಾಗಿಯೂ ಯಾರೊಬ್ಬರೂ ಸಾವನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ’ ಎಂದಿದ್ದಾರೆ. ಮುಂದುವರಿದು ಯಾವುದೇ ಸರ್ಕಾರಕ್ಕೆ ಪ್ರತಿಯೊಬ್ಬ ವ್ಯಕ್ತಿಯ ಸುರಕ್ಷತೆ ಅತ್ಯಂತ ಮುಖ್ಯವಾದದ್ದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಭಾರತ ಮತ್ತು ಬಿಹಾರದಲ್ಲಿ ಕೊರೊನಾವೈರಸ್‌ ಪ್ರಕರಣಗಳು ಹೆಚ್ಚುತ್ತಿರುವ ರೀತಿ ತುಂಬಾ ನೋವಿನ ಸಂಗತಿಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಕೋವಿಡ್–19 ಸಾಂಕ್ರಾಮಿಕ ರೋಗದ ಕಾರಣ ಚುನಾವಣೆಯನ್ನು ಮುಂದೂಡಬೇಕು ಎಂಬುದು ಬಿಜೆಪಿಯ ಹೆಚ್ಚಿನ ನಾಯಕರ ಬಯಕೆಯಾಗಿದೆ ಎಂದೂ ಹೇಳಿದ್ದಾರೆ.

ಕೋವಿಡ್–19 ಪರಿಸ್ಥಿತಿ ಸುಧಾರಿಸಿದ ಬಳಿಕ ಸೂಕ್ತ ಸಮಯದಲ್ಲಿ ಚುನಾವಣೆ ನಡೆಸಬೇಕು ಎಂದು ಎನ್‌ಡಿಎ ಮಿತ್ರಪಕ್ಷವಾಗಿರುವವ ಎಲ್‌ಜೆಪಿ ಇದಕ್ಕೂ ಮೊದಲು ಒತ್ತಾಯಿಸಿತ್ತು.

ಚುನಾವಣಾ ಸಮಿತಿ ಜುಲೈ 17 ರಂದು ಹೊರಡಿಸಿದ್ದ ಪತ್ರಿಕಾ ಪ್ರಕಟಣೆಯಲ್ಲಿ,ಚುನಾವಣೆ ನಡೆಸುವ ಬಗ್ಗೆ ರಾಜಕೀಯ ಪಕ್ಷಗಳು ಸಲಹೆಗಳನ್ನು ನೀಡಬೇಕು ಎಂದು ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.