ಬೆಂಗಳೂರು: ಹಲವು ರಾಜ್ಯದಲ್ಲಿನ ಚುನಾವಣಾ ಆಯೋಗದ ವೆಬ್‌ಸೈಟ್ ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ. ಆದರೆ ಈ ಆರೋಪಗಳನ್ನು ಚುನಾವಣಾ ಆಯೋಗ ಅಲ್ಲಗಳೆದಿದೆ.
ಕಾಂಗ್ರೆಸ್ ಹಾಗೂ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, 2024ರ ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನವಾಗಿದೆ. ಬಿಜೆಪಿಯು ಚುನಾವಣೆಗಳನ್ನು ಗೆಲ್ಲಲು ಚುನಾವಣಾ ಆಯೋಗ ಸಾಥ್ ನೀಡಿದೆ ಎಂದು ಗುರುವಾರವಷ್ಟೇ ಆರೋಪಿಸಿದ್ದರು. ಇದರ ಬೆನ್ನಲ್ಲೇ, ಹಲವು ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್ ಸ್ಥಗಿತಗೊಂಡಿರುವುದಾಗಿ ಕೆಲವರು ಆರೋಪಿಸಿದ್ದಾರೆ.
#VoteChori ಟ್ಯಾಗ್ ಬಳಸಿ ಟ್ವೀಟ್ ಮಾಡಿರುವ ಸಮೃದ್ದಿ ಎಂಬವರು, 'ಮಹಾರಾಷ್ಟ್ರ, ಬಿಹಾರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಚುನಾವಣಾ ಆಯೋಗದ ವೆಬ್‌ಸೈಟ್‌ನ ಇ–ವೋಟರ್ ಪಟ್ಟಿ ಓಪನ್ ಆಗುತ್ತಿಲ್ಲ. ಜನರು ಇದೀಗ, ರಾಹುಲ್ ಆರೋಪಗಳನ್ನು ನಂಬುತ್ತಾರೆ. ಬಿಜೆಪಿಯ ಭಕ್ತರು ಏನಾದರೂ ಹೇಳಲು ಬಯಸುವರೇ' ಎಂದು ಕೇಳಿದ್ದಾರೆ.
ಇದಕ್ಕೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಇನ್ನಷ್ಟು ಮಂದಿ ಹಂಚಿಕೊಂಡಿದ್ದಾರೆ.
ಆದರೆ, 'ಎಕ್ಸ್'ನಲ್ಲಿಯೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚುನಾವಣಾ ಆಯೋಗ, ಯಾವುದೇ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಮತದಾರರ ಪಟ್ಟಿಯನ್ನು ಯಾರು ಬೇಕಾದರೂ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಅದಕ್ಕೆ ಸಂಬಂಧಿಸಿದ ಲಿಂಕ್ ಅನ್ನೂ ನೀಡಿದೆ.
'ಜನರು ಪ್ರಶ್ನಿಸಿದರೆ ನಾಟಕ ಬಯಲು'
2024ರ ಲೋಕಸಭೆ ಚುನಾವಣೆ ವೇಳೆ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳ ಕಳ್ಳತನವಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ರಾಹುಲ್ ಗಾಂಧಿ ಗುರುವಾರ ಬಿಡುಗಡೆ ಮಾಡಿದ್ದರು.
ಅದೇ ವಿಚಾರವಾಗಿ ಇಂದು (ಶುಕ್ರವಾರ) ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿರುವ ರಾಹುಲ್, 'ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳುತ್ತಿದೆ. ಪ್ರಮಾಣ ಮಾಡುವಂತೆ ಹೇಳುತ್ತಿದೆ. ನಾನು ಹೇಳಿದ್ದೆಲ್ಲವೂ ಸತ್ಯವೆಂದು ಸಂಸತ್ತಿನಲ್ಲೇ ಸಂವಿಧಾನದ ಹೆಸರಿನಲ್ಲಿ ಪ್ರತಿಜ್ಞೆ ಮಾಡಿದ್ದೇನೆ. ದೇಶದ ಜನರು ನಮ್ಮ ದಾಖಲೆಗಳನ್ನಿಟ್ಟುಕೊಂಡು ಚುನಾವಣಾ ಆಯೋಗವನ್ನು ಪ್ರಶ್ನಿಸಲಾರಂಭಿಸುತ್ತಿದ್ದಂತೆ ವೆಬ್‌ಸೈಟ್ ಅನ್ನು ಬಂದ್ ಮಾಡಲಾಗಿದೆ. ಜನರು ಪ್ರಶ್ನಿಸಲು ಆರಂಭಿಸಿದರೆ ತಮ್ಮ ನಾಟಕ ಬಯಲಾಗುತ್ತದೆ ಎಂಬ ಭಯ ಆಯೋಗವನ್ನು ಆವರಿಸಿದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.