ADVERTISEMENT

ಈಶಾನ್ಯ ಭಾರತದ ಚುನಾವಣಾ ಫಲಿತಾಂಶ: ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆ ಎಂದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2023, 15:29 IST
Last Updated 2 ಮಾರ್ಚ್ 2023, 15:29 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಈಶಾನ್ಯ ಭಾರತದ (ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌) ಚುನಾವಣಾ ಫಲಿತಾಂಶ ದೇಶದ ಪ್ರಗತಿ, ಸ್ಥಿರತೆಗೆ ಪ್ರೇರಣೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತ್ರಿಪುರಾ ಮತ್ತು ನಾಗಾಲ್ಯಾಂಡ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಸಾಧಿಸಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚಿಸಲು ಸಜ್ಜಾಗಿದೆ. ಇತ್ತ ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಬೆಂಬಲದೊಂದಿಗೆ ಎನ್‌ಪಿಪಿ ಪಕ್ಷ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.

ಮೂರು ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಸರಣಿ ಟ್ವೀಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.

ADVERTISEMENT

'ಧನ್ಯವಾದ ತ್ರಿಪುರಾ! ಈ ಮತ ಪ್ರಗತಿ ಮತ್ತು ಸ್ಥಿರತೆಗಾಗಿ. ಬಿಜೆಪಿಯು ರಾಜ್ಯದ ಅಭಿವೃದ್ಧಿಯ ಪಥಕ್ಕೆ ಉತ್ತೇಜನ ನೀಡಲಿದೆ. ತ್ರಿಪುರಾದಲ್ಲಿ ಬೇರು ಮಟ್ಟದಿಂದ ಅದ್ಬುತವಾಗಿ ಶ್ರಮಿಸಿದ ಬಿಜೆಪಿಯ ಎಲ್ಲ ಕಾರ್ಯಕರ್ತರ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಎನ್‌ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಮತ್ತೊಮ್ಮೆ ಆಶೀರ್ವದಿಸಿದ್ದಕ್ಕಾಗಿ ನಾನು ನಾಗಾಲ್ಯಾಂಡ್ ಜನರಿಗೆ ಧನ್ಯವಾದ ಹೇಳುತ್ತೇನೆ. ಡಬಲ್ ಎಂಜಿನ್ ಸರ್ಕಾರ ರಾಜ್ಯದ ಪ್ರಗತಿಗೆ ಶ್ರಮಿಸುತ್ತದೆ. ನಮ್ಮ ಪಕ್ಷದ ಕಾರ್ಯಕರ್ತರ ಶ್ರಮಕ್ಕಾಗಿ ನಾನು ಶ್ಲಾಘಿಸುತ್ತೇನೆ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಮೇಘಾಲಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ ಎಲ್ಲರಿಗೂ ಕೃತಜ್ಞತೆಗಳು. ಮೇಘಾಲಯದ ಅಭಿವೃದ್ಧಿ ಪಥವನ್ನು ಹೆಚ್ಚಿಸಲು ಮತ್ತು ರಾಜ್ಯದ ಜನರನ್ನು ಸಬಲೀಕರಣಗೊಳಿಸುವತ್ತ ಗಮನ ಹರಿಸಲು ನಾವು ಶ್ರಮಿಸುತ್ತೇವೆ. ನಮ್ಮ ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಮೋದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ತ್ರಿಪುರಾ ಫಲಿತಾಂಶ: 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 54 ಕಡೆ ಹಾಗೂ ಅದರ ಮಿತ್ರ ಪಕ್ಷದ ಇಂಡಿಜೀನಿಯಸ್‌ ಪೀಪಲ್ಸ್‌ ಪ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌ಟಿ) 6 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಸದ್ಯ ಎಲ್ಲ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿ 32 ಕಡೆ ಜಯ ಕಂಡಿದ್ದು, ಐಪಿಎಫ್‌ಟಿ 1 ಕ್ಷೇತ್ರ ಜಯಿಸಿದೆ. ಇದೇ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಹೊಸ ಪಕ್ಷ ತಿಪ್ರ ಮೋಥಾ ಪಾರ್ಟಿ 13 ಸ್ಥಾನಗಳನ್ನು ಗೆದ್ದುಕೊಂಡಿದೆ. ಉಳಿದಂತೆ ಕಮ್ಯುನಿಸ್ಟ್‌ ಪಾರ್ಟಿ (ಸಿಪಿಐ) 11 ಮತ್ತು ಕಾಂಗ್ರೆಸ್‌ 3 ಸ್ಥಾನಗಳನ್ನು ಜಯಿಸಿವೆ.

ಮೇಘಾಲಯ ಅತಂತ್ರ ಫಲಿತಾಂಶ: ಮೇಘಾಲಯದ ಒಟ್ಟು 60 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಫೆಬ್ರುವರಿ 27ರಂದು ಚುನಾವಣೆ ನಡೆದಿತ್ತು. ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

59 ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳ ಫಲಿತಾಂಶ ಗುರುವಾರ ರಾತ್ರಿ 7 ಗಂಟೆ ಹೊತ್ತಿಗೆ ಪ್ರಕಟವಾಗಿದ್ದು, ಎನ್‌ಪಿಪಿ 24ರಲ್ಲಿ ಗೆದ್ದು 2ರಲ್ಲಿ ಮುನ್ನಡೆ ಸಾಧಿಸಿದೆ. ಯುಡಿಪಿ 11, ಕಾಂಗ್ರೆಸ್‌ 5, ಟಿಎಂಸಿ 5, ಬಿಜೆಪಿ 2, ಎಚ್‌ಎಸ್‌ಪಿಡಿಪಿ 2, ಪಿಡಿಎಫ್‌ 2, ವಾಯ್ಸ್‌ ಆಫ್‌ ಪೀಪಲ್‌ ಪಾರ್ಟಿ 4, ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ.

ನಾಗಾಲ್ಯಾಂಡ್‌ ಫಲಿತಾಂಶ: ನಾಗಾಲ್ಯಾಂಡ್‌ ವಿಧಾನಸಭೆಯ 60 ಕ್ಷೇತ್ರಗಳ ಪೈಕಿ 56 ಕ್ಷೇತ್ರಗಳ ಫಲಿತಾಂಶ ಹೊರಬಿದಿದ್ದೆ. ಎನ್‌ಡಿಪಿಪಿ (23) ಮತ್ತು ಬಿಜೆಪಿ (12) ಮೈತ್ರಿಕೂಟ 35 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ. ಉಳಿದಂತೆ ಕಾಂಗ್ರೆಸ್ 6, ಎನ್‌ಪಿಪಿ 5, ಎನ್‌ಪಿಎಫ್ 2, ಎಲ್‌ಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.