ಕೇರಳದ ತಿರೂರ್ ಬಳಿಯ ಮಸೀದಿಯಲ್ಲಿ ಬೆಚ್ಚಿದ ಆನೆ ಜನರತ್ತ ನುಗ್ಗಿದ ಕ್ಷಣ
ಮಲಪ್ಪುರಂ: ಕೇರಳದ ತಿರೂರ್ ಬಳಿಯ ಮಸೀದಿಯಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಆನೆಯೊಂದು ಬೆಚ್ಚಿದ ಪರಿಣಾಮ 23 ಜನರಿಗೆ ಗಾಯಗಳಾಗಿವೆ.
ಮಂಗಳವಾರ ಮಧ್ಯ ರಾತ್ರಿ ಈ ಘಟನೆ ನಡೆದಿದ್ದು, ಬೆಚ್ಚಿದ ಆನೆ ವ್ಯಕ್ತಿಯೊಬ್ಬರನ್ನು ಸೊಂಡಲಿನಿಂದ ಎತ್ತಿ, ಎಸೆದಿದೆ. ಇದರಲ್ಲಿ ಗಾಯಗೊಂಡ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಆನೆಯ ವರ್ತನೆ ಕಂಡು ಹೆದರಿದ ಜನರು ಓಡಿದ ಪರಿಣಾಮ ಉಂಟಾದ ಕಾಲ್ತುಳಿತದಲ್ಲಿ ಉಳಿದ 22 ಮಂದಿಗೆ ಗಾಯಗಳಾಗಿವೆ.
ಧಾರ್ಮಿಕ ಕಾರ್ಯಕ್ರಮಕ್ಕಾಗಿ ಐದು ಆಲಂಕೃತ ಆನೆಗಳು ಸಜ್ಜಾಗಿದ್ದವು. ಇದರಲ್ಲಿ ಕೋಪಗೊಂಡ ಒಂದು ಆನೆ, ಎದುರಿಗಿದ್ದ ಜನರ ಮೇಲೆ ಎರಗಿದೆ. ಎದುರಿಗೆ ಸಿಕ್ಕ ಒಬ್ಬ ವ್ಯಕ್ತಿಯನ್ನು ಸೊಂಡಲಿನಿಂದ ಎತ್ತಿದ ಆನೆ, ತಿರುವಿ ಎಸೆದಿದೆ.
ಮಾವುತರ ನಿರಂತರ ಪ್ರಯತ್ನದಿಂದಾಗಿ ಕೆಲ ಹೊತ್ತಿನ ನಂತರ ಆನೆಯನ್ನು ಹತೋಟಿಗೆ ತರಲಾಯಿತು. ಕಾರ್ಯಕ್ರಮದಲ್ಲಿ ಆನೆಯನ್ನು ಬಳಸುವ ಕುರಿತು ಮಸೀದಿಯ ಆಡಳಿತ ಮಂಡಳಿ ಅನುಮತಿ ಪಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.