ADVERTISEMENT

ಬದಲಾವಣೆಯನ್ನು ಸ್ವೀಕರಿಸಿ ಮತ ಹಾಕಿ: ವಿಡಿಯೊ ಸಂದೇಶದಲ್ಲಿ ಶಶಿ ತರೂರ್ ಮನವಿ

ಪಿಟಿಐ
Published 17 ಅಕ್ಟೋಬರ್ 2022, 3:22 IST
Last Updated 17 ಅಕ್ಟೋಬರ್ 2022, 3:22 IST
   

ನವದೆಹಲಿ: ಬದಲಾವಣೆಯನ್ನು ಸ್ವೀಕರಿಸಿ, ಧೈರ್ಯಮಾಡಿ ಮತ ಹಾಕಿ ಎಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಶಶಿ ತರೂರ್ ಅವರು ತಮ್ಮ ಪಕ್ಷದ ಮತದಾರರಿಗೆ ಮನವಿ ಮಾಡಿದ್ದಾರೆ.

ನಮ್ಮ ಗುರಿ ಸಾಧಿಸುವ ಮಾರ್ಗ ಬದಲಾವಣೆ ಆಗಬೇಕಿದೆ. ಪಕ್ಷದ ‘ಮೌಲ್ಯಗಳು ಮತ್ತು ನಿಷ್ಠೆ’ಹಾಗೇ ಇರುತ್ತವೆ ಎಂದು ಅವರು ಹೇಳಿದ್ದಾರೆ.

ಎಐಸಿಸಿಯ ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡುವ 9,000 ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಪ್ರತಿನಿಧಿಗಳಿಗೆ ತಮ್ಮ ಕೊನೆಯ ಮನವಿಯಲ್ಲಿ ತರೂರ್, ಕಳೆದ ಕೆಲವು ದಿನಗಳಿಂದ ತಾವು ನಡೆಸಿದ ಸಂಭಾಷಣೆಯಲ್ಲಿ ಅನೇಕರು ಬದಲಾವಣೆಗೆ ಹಿಂಜರಿಕೆ ಹೊಂದಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ.

ADVERTISEMENT

ತರೂರ್ ತಮ್ಮನ್ನು ತಾವು ಬದಲಾವಣೆಯ ಅಭ್ಯರ್ಥಿ ಎಂದು ಹೇಳಿಕೊಂಡು ಕಣಕ್ಕಿಳಿದಿದ್ದರೆ, ಖರ್ಗೆ ಅವರನ್ನು ಹೈಕಮಾಂಡ್‌ನ ನೆಚ್ಚಿನ ಮತ್ತು 'ಅನಧಿಕೃತ ಅಧಿಕೃತ ಅಭ್ಯರ್ಥಿ' ಎಂದು ಪರಿಗಣಿಸಲಾಗಿದ್ದು, ಹೆಚ್ಚಿನ ಸಂಖ್ಯೆಯ ಹಿರಿಯ ನಾಯಕರು ಖರ್ಗೆ ಅವರನ್ನು ಬೆಂಬಲಿಸಿದ್ದಾರೆ.

‘ನಮ್ಮಂತಹ ದೊಡ್ಡ ಸಂಘಟನೆಯಲ್ಲಿ ಬದಲಾವಣೆಯ ಬಗ್ಗೆ ಕಳವಳ ಇರುವುದು ಸಹಜ. ಅದಕ್ಕಾಗಿಯೇ ನಾನು ಇದನ್ನು ನೇರವಾಗಿ ತಿಳಿಸಲು ಬಯಸುತ್ತೇನೆ’ಎಂದು ತರೂರ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ತಮ್ಮ ವಿಡಿಯೊ ಮನವಿಯಲ್ಲಿ ತಿಳಿಸಿದ್ದಾರೆ.

‘ಕಳೆದ ಕೆಲವು ದಿನಗಳಲ್ಲಿ ನಾನು ನಡೆಸಿದ ಸಂಭಾಷಣೆಗಳಲ್ಲಿ, ನಿಮ್ಮಲ್ಲಿ ಅನೇಕರು ಇನ್ನೂ ಯಾರಿಗೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸಿಲ್ಲ. ಬದಲಾವಣೆಗಾಗಿ ನಿಮ್ಮಲ್ಲಿರುವ ಹಿಂಜರಿಕೆಯನ್ನೂ ಗಮನಿಸಿದ್ದೇನೆ. ನನ್ನ ವಿಕೇಂದ್ರೀಕರಣ, ಆಧುನೀಕರಣ ಮತ್ತು ಒಳಗೊಳ್ಳುವಿಕೆಯ ಸಂದೇಶವು ನಿಮಗೆ ಇಷ್ಟವಾಗಬಹುದು ಎಂದು ನಾನು ಅಂದುಕೊಂಡಿತ್ತೇನೆ’ ಎಂದು ತರೂರ್ ಹೇಳಿದ್ದಾರೆ.

ಯಾವುದೇ ಪರಿಸ್ಥಿತಿಯಲ್ಲಿ ಅಗತ್ಯವಾಗಿದ್ದಾಗ ಬದಲಾವಣೆಯನ್ನು ಪಕ್ಷ ಸ್ವೀಕರಿಸುತ್ತಲೇ ಬಂದಿದೆ. ಹಾಗಾಗಿಯೇ, ಭಾರತದ ರಾಜಕೀಯದಲ್ಲಿ ಕಾಂಗ್ರೆಸ್ ಪ್ರಮುಖ ಶಕ್ತಿಯಾಗಿ ಉಳಿದುಕೊಂಡಿದೆ ಎಂದು ತರೂರ್ ಹೇಳಿದ್ದಾರೆ.

1991ರ ಆರ್ಥಿಕ ಉದಾರೀಕರಣ, ಇಂದಿರಾ ಗಾಂಧಿ ನಿಧನದ ಬಳಿಕ ರಾಜೀವ್ ಗಾಂಧಿ ತಂದ ಪೀಳಿಗೆಯ ಬದಲಾವಣೆ ಹಾಗೂ 1960 ಮತ್ತು 70ರ ದಶಕದ ಹಸಿರು ಕ್ರಾಂತಿಯಂತಹ ಉದಾಹರಣೆಗಳನ್ನು ಅವರು ಮುಂದಿಟ್ಟಿದ್ದಾರೆ.

ಈ ಬದಲಾವಣೆಗಳಿಂದಾಗಿ ಪಕ್ಷವು ಬಲಗೊಂಡಿರುವುದನ್ನು ಅನೇಕರು ಗಮನಿಸಿದ್ದಾರೆ ಎಂದು ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.