ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಸಂತ್ರಸ್ತರಾದ ಮಹಿಳೆ ಮತ್ತು ಮಗುವನ್ನು ರಕ್ಷಿಸಿದ ರಕ್ಷಣಾ ಸಿಬ್ಬಂದಿ
ರಾಯಿಟರ್ಸ್ ಚಿತ್ರ
ವಯನಾಡು: ‘ಎಲ್ಲಿಗೆ ಹೋಗಬೇಕು, ಕುಟುಂಬ ಸದಸ್ಯರನ್ನು ಎಲ್ಲಿ ಹುಡಕಬೇಕು ಎನ್ನುವುದು ತಿಳಿಯುತ್ತಿಲ್ಲ, ನಮ್ಮ ಎರಡು ಮಕ್ಕಳು ಕೂಡ ನಾಪತ್ತೆಯಾಗಿದ್ದಾರೆ ಏನು ಮಾಡಲಿ?’ ಎಂದು ವಯನಾಡಿನ ಜಿಲ್ಲಾಸ್ಪತ್ರೆಯಲ್ಲಿ ನಿಂತು ಕಣ್ಣಲ್ಲಿ ನೀರು ತುಂಬಿಕೊಂಡು ಮಹಿಳೆಯೊಬ್ಬರು ನೋವು ಹಂಚಿಕೊಂಡರು.
ನಿರಂತರ ಮಳೆಯಿಂದಾಗಿ ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ 50 ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ, ನೂರಾರು ಕುಟುಂಬ ಸೂರು ಕಳೆದುಕೊಂಡು ನಿರಾಶ್ರಿತವಾಗಿದೆ.
ಜಿಲ್ಲಾಸ್ಪತ್ರೆಯಲ್ಲಿ ಇರುವ ಚಿಕ್ಕ ಜಾಗದಲ್ಲಿ ಸಾಲಾಗಿ ಇರಿಸಿದ ಮೃತದೇಹಗಳನ್ನು ನೋಡಿ, ಪ್ರೀತಿ ಪಾತ್ರರನ್ನು ಹುಡುಕುತ್ತ ಹತಾಶೆಯಲ್ಲಿ ಕುಟುಂಬ ಸದಸ್ಯರು ಓಡಾಡುವ ದೃಶ್ಯ ಮನಕಲಕುವಂತಿದೆ.
ವ್ಯಕ್ತಿಯೊಬ್ಬರು, ‘ತನ್ನ ಸಹೋದರ ಮೃತಪಟ್ಟಿದ್ದಾನೆ’ ಎಂದು ದುಃಖದಿಂದ ಹೇಳುವುದು ಒಂದೆಡೆಯಾದರೆ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ‘ನನ್ನ 12 ವರ್ಷದ ಮಗಳು ಸೇರಿ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾರೆ, ಸಾಧ್ಯವಾದರೆ ಹುಡುಕಿಕೊಡಿ’ ಎಂದು ಕಣ್ಣೀರಾದರು.
ಅಂಗವಿಕಲ ವ್ಯಕ್ತಿಯೊಬ್ಬರು ಗಾಲಿ ಕುರ್ಚಿಯನ್ನು ತಳ್ಳುತ್ತಾ ಕಣ್ಮರೆಯಾದ ತಮ್ಮ ಎಲ್ಲಿ ಶವವಾಗಿ ಪತ್ತೆಯಾಗುತ್ತಾನೊ ಎನ್ನುವ ಭಯದಲ್ಲಿ ಆಸ್ಪತ್ರೆಯ ಪ್ರತಿ ಕೋಣೆಗೆ ಹೋಗಿ ಹುಡುಕುತ್ತಿದ್ದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಮಳೆ ಹೆಚ್ಚಾದ ಕಾರಣ ನನ್ನ ಹೆಂಡತಿ ಮತ್ತು ಮಗನನ್ನು ನಿನ್ನೆಯಷ್ಟೇ ಸಂಬಂಧಿಕರ ಮನೆಗೆ ಕಳುಹಿಸಿದ್ದೆ, ಆದರೆ ನಮ್ಮ ಮನೆಯ ಪಕ್ಕದಲ್ಲೇ ವಾಸವಿದ್ದ ಸಹೋದರನ ಕುಟುಂಬ ಸದಸ್ಯರು ಕಾಣೆಯಾಗಿದ್ದಾರೆ, ಅವರು ಸುರಕ್ಷಿತವಾಗಿದ್ದಾರೆ, ಯಾರಾದರೂ ಅವರನ್ನು ರಕ್ಷಿಸಿರುತ್ತಾರೆ ಎನ್ನುವ ನಂಬಿಕೆಯಿದೆ’ ಎಂದು ಅಳಲು ತೋಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.