ADVERTISEMENT

NDA ಸರ್ಕಾರದ ಅವಧಿಯಲ್ಲಿ 17 ಕೋಟಿ ಉದ್ಯೋಗ ಸೃಷ್ಟಿ ಅಧಿಕ: ಸಚಿವ ಮನ್ಸುಖ್

ಪಿಟಿಐ
Published 2 ಜನವರಿ 2025, 9:30 IST
Last Updated 2 ಜನವರಿ 2025, 9:30 IST
<div class="paragraphs"><p>ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಖ್‌ ಮಾಂಡವೀಯಾ</p></div>

ಕೇಂದ್ರ ಕಾರ್ಮಿಕ ಸಚಿವ ಡಾ. ಮನ್ಸುಖ್‌ ಮಾಂಡವೀಯಾ

   

ನವದೆಹಲಿ: ‘ಡಾ.ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ 2.9 ಕೋಟಿ ಉದ್ಯೋಗಗಳಷ್ಟೇ ಸೃಷ್ಟಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಹತ್ತು ವರ್ಷದ ಅಧಿಕಾರಾವಧಿಯಲ್ಲಿ 17.19 ಕೋಟಿ ಉದ್ಯೋಗ ಸೃಷ್ಟಿಸಲಾಗಿದೆ’ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ 2014–15ರಲ್ಲಿ 47.15 ಕೋಟಿ ಇದ್ದ ಉದ್ಯೋಗಗಳು, 2023–24ರಲ್ಲಿ 64.33 ಕೋಟಿಗೆ ಏರಿಕೆಯಾಗಿವೆ. ಒಂದು ದಶಕದ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಶೇ 36ರಷ್ಟು ಏರಿಕೆಯಾಗಿದೆ’ ಎಂದು ಹೇಳಿದರು. 

ADVERTISEMENT

ಯುಪಿಎ ಅವಧಿಯಲ್ಲಿ (2004–2014) ಉದ್ಯೋಗ ಸೃಷ್ಟಿಯಲ್ಲಿ ಶೇ 7ರಷ್ಟು ಏರಿಕೆಯಾಗಿತ್ತು ಎಂದರು.

ಕಳೆದ ಒಂದು ವರ್ಷದಲ್ಲಿ (2023–24ರಲ್ಲಿ) ಸರ್ಕಾರವು 4.6 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಹೇಳಿದರು.

ಕೃಷಿ ವಲಯ:

ಯುಪಿಎ ಅವಧಿ ವೇಳೆ ಕೃಷಿ ವಲಯದಲ್ಲಿ ಶೇ 16ರಷ್ಟು ಉದ್ಯೋಗ ಕುಸಿತವಾಗಿತ್ತು. 2014–23ರ ನಡುವೆ ಶೇ 19ರಷ್ಟು ಏರಿಕೆಯಾಗಿದೆ ಎಂದರು.

ತಯಾರಿಕಾ ವಲಯ: ಯುಪಿಎ ಅವಧಿಯಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಶೇ 6ರಷ್ಟು ಏರಿಕೆಯಾಗಿತ್ತು. ಮೋದಿ ಅವಧಿಯಲ್ಲಿ ಶೇ 15ರಷ್ಟು ಏರಿಕೆಯಾಗಿದೆ. ಮನಮೋಹನ್‌ ಸಿಂಗ್ ಅವಧಿಯಲ್ಲಿ ಸೇವಾ ವಲಯದಲ್ಲಿ ಶೇ 25ರಷ್ಟು ಉದ್ಯೋಗ ಸೃಷ್ಟಿಯಾಗಿದ್ದರೆ, ಎನ್‌ಡಿಎ ಅಧಿಕಾರಾವಧಿಯಲ್ಲಿ ಶೇ 36ರಷ್ಟು ಹೆಚ್ಚಳವಾಗಿದೆ ಎಂದು ತಿಳಿಸಿದರು. 

2017–18ರಲ್ಲಿ ಶೇ 6ರಷ್ಟಿದ್ದ ನಿರುದ್ಯೋಗ ದರವು 2023–24ರಲ್ಲಿ ಶೇ 3.2ಕ್ಕೆ ತಗ್ಗಿದೆ. ಉದ್ಯೋಗ ದರವು ಶೇ 46.8ರಿಂದ ಶೇ 58.2ಕ್ಕೆ ಏರಿಕೆಯಾಗಿದೆ. ಕಾರ್ಮಿಕರ ಪಾಲ್ಗೊಳ್ಳುವಿಕೆ ದರವು ಶೇ 49.8ರಿಂದ ಶೇ 60.1ಕ್ಕೆ ಹೆಚ್ಚಳವಾಗಿದೆ ಎಂದು ವಿವರಿಸಿದರು.

ಔಪಚಾರಿಕ ವಲಯ: ಉದ್ಯೋಗಕ್ಕೆ ಸೇರ್ಪಡೆಗೊಳ್ಳುವ ಯುವಜನರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ. ಕಳೆದ ಏಳು ವರ್ಷದ ಅವಧಿಯಲ್ಲಿ (2017ರ ಸೆಪ್ಟೆಂಬರ್‌ನಿಂದ 2024ರ ಸೆಪ್ಟೆಂಬರ್‌ವರೆಗೆ) 4.7 ಕೋಟಿ ಯುವಜನರು (18ರಿಂದ 28 ವರ್ಷ) ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆಗೆ ಸೇರ್ಪಡೆಗೊಂಡಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.