ADVERTISEMENT

ಸುದ್ದಿಗೆ ಗೂಗಲ್‌, ಫೇಸ್‌ಬುಕ್ ಹಣ ಕೊಡಲಿ: ಆಸ್ಟ್ರೇಲಿಯಾ ಮಾದರಿ ಕಾನೂನಿಗೆ ಆಗ್ರಹ

ಪಿಟಿಐ
Published 17 ಮಾರ್ಚ್ 2021, 14:23 IST
Last Updated 17 ಮಾರ್ಚ್ 2021, 14:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಆಸ್ಟ್ರೇಲಿಯಾ ಮಾದರಿಯಲ್ಲಿ ಸುದ್ದಿ, ಲೇಖನ ಬಳಸಿಕೊಳ್ಳಲು ಗೂಗಲ್ ಮತ್ತು ಫೇಸ್‌ಬುಕ್‌ ಮಾಧ್ಯಮಗಳಿಗೆ ಹಣ ನೀಡಬೇಕೆಂಬ ಕಾನೂನು ರೂಪಿಸಬೇಕು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ‘ಗೂಗಲ್, ಫೇಸ್‌ಬುಕ್, ಹಾಗೂ ಯೂಟ್ಯೂಬ್‌ಗಳು ಉಚಿತವಾಗಿ ಸುದ್ದಿಗಳನ್ನು ಬಳಸಿಕೊಳ್ಳುತ್ತಿವೆ. ಇವುಗಳು ಮುದ್ರಣ ಮಾಧ್ಯಮ ಮತ್ತು ಸುದ್ದಿ ವಾಹಿನಿಗಳಿಗೆ ಹಣ ಪಾವತಿಸುವಂತೆ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಅವರು ಆಗ್ರಹಿಸಿದ್ದಾರೆ.

ಸುದ್ದಿ ಮಾಧ್ಯಮ ಉದ್ಯಮಗಳಿಗೆ ಅವುಗಳ ವಿಷಯಕ್ಕೆ ತಕ್ಕ ಸಂಭಾವನೆ ದೊರೆಯುವುದನ್ನು ಖಚಿತಪಡಿಸಿಕೊಳ್ಳುವ ವಿಶ್ವದ ಮೊದಲ ಕಾನೂನಿಗೆ ಆಸ್ಟ್ರೇಲಿಯಾ ಸಂಸತ್‌ ಕಳೆದ ತಿಂಗಳು ಅನುಮೋದನೆ ನೀಡಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ದೇಶೀಯವಾಗಿ ಸುದ್ದಿ ಒದಗಿಸುವ ಮಾಧ್ಯಮಗಳಿಗೆ ಗೂಗಲ್ ಮತ್ತು ಫೇಸ್‌ಬುಕ್ ತಮ್ಮ ಗಳಿಕೆಯ ನ್ಯಾಯಯುತ ಪಾಲನ್ನು ಒದಗಿಸುವಂತೆ ಮಾಡಬೇಕು. ಈ ವಿಚಾರದಲ್ಲಿ ಭಾರತವು ಮುಂದಾಳತ್ವ ವಹಿಸಬೇಕು ಎಂದೂ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.

ಸಾಂಪ್ರದಾಯಿಕ ಮುದ್ರಣ ಮತ್ತು ಸುದ್ದಿ ಪ್ರಸಾರ ಮಾಧ್ಯಮಗಳ ವಿಷಯಗಳು ಟೆಕ್ ದೈತ್ಯರು ನಡೆಸುವ ತಾಣಗಳಲ್ಲಿ ಮುಕ್ತವಾಗಿ ದೊರೆಯುತ್ತಿವೆ. ಇದರಿಂದಾಗಿ ಜಾಹೀರಾತುಗಳೂ ಟೆಕ್‌ ತಾಣಗಳಿಗೆ ವರ್ಗವಾಗಿರುವುದರಿಂದ ಸಾಂಪ್ರದಾಯಿಕ ಮುದ್ರಣ ಮತ್ತು ಸುದ್ದಿ ಪ್ರಸಾರ ಮಾಧ್ಯಮಗಳು ಕಷ್ಟಕ್ಕೆ ಸಿಲುಕಿವೆ. ಈ ಹಿಂದೆ ಸಾಂಕ್ರಾಮಿಕದಿಂದಾಗಿ ಮಾಧ್ಯಮಗಳು ಸಂಕಷ್ಟಕ್ಕೀಡಾದರೆ, ಈಗ ಯೂಟ್ಯೂಬ್, ಫೇಸ್‌ಬುಕ್ ಹಾಗೂ ಗೂಗಲ್‌ಗಳಿಂದಾಗಿ ತೊಂದರೆಗೆ ಸಿಲುಕಿವೆ’ ಎಂದೂ ಮೋದಿ ಹೇಳಿದ್ದಾರೆ.

ಇದು ಪರಿಗಣಿಸಬೇಕಾದ ಸಲಹೆ ಎಂದು ರಾಜ್ಯಸಭೆ ಉಪ ಸಭಾಪತಿ, ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.