ADVERTISEMENT

ಬುದ್ಗಾಮ್‌ನಲ್ಲಿ ಎನ್‌ಕೌಂಟರ್: ಲಷ್ಕರ್‌–ಎ–ತಯಬಾ ಸಂಘಟನೆಯ ಮೂವರು ಉಗ್ರರ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಆಗಸ್ಟ್ 2022, 3:00 IST
Last Updated 10 ಆಗಸ್ಟ್ 2022, 3:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ಎನ್‌ಕೌಂಟರ್ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಷ್ಕರ್‌–ಎ–ತಯಬಾ (ಎಲ್‌ಇಟಿ) ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ.

ಬುದ್ಗಾಮ್‌ನ ವಾಟರ್‌ಹೇಲ್ ಪ್ರದೇಶದಲ್ಲಿ ಉಗ್ರರು ನೆಲೆಗೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಬೆಳಿಗ್ಗೆಯೇ ಕಾರ್ಯಾಚರಣೆ ನಡೆಸಿದವು.

ADVERTISEMENT

ಬಂಧಿತ ಉಗ್ರ ಲತೀಫ್ ರಾಥರ್, ಕಾಶ್ಮೀರಿ ಪಂಡಿತ ರಾಹುಲ್ ಭಟ್ ಮತ್ತು ಅಮ್ರೀನ್ ಭಟ್ ಸೇರಿದಂತೆ ಹಲವಾರು ನಾಗರಿಕರ ಹತ್ಯೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕಳೆದ ಮೇ ತಿಂಗಳಲ್ಲಿ ಬುದ್ಗಾಮ್‌ನಲ್ಲಿ ಕಂದಾಯ ಇಲಾಖೆಯ ಉದ್ಯೋಗಿಯಾಗಿದ್ದ ರಾಹುಲ್ ಭಟ್ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಘಟನೆ ಖಂಡಿಸಿ ಕಾಶ್ಮೀರಿ ಪಂಡಿತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು.

ಕಾಶ್ಮೀರದ ಕಿರುತೆರೆ ನಟಿ ಅಮ್ರೀನ್ ಭಟ್ ಅವರನ್ನು ಮೇ 26ರಂದು ಬುದ್ಗಾಮ್‌ನ ಚದೂರ ಪ್ರದೇಶದಲ್ಲಿ ಭಯೋತ್ಪಾದಕರು ಹತ್ಯೆ ಮಾಡಿದ್ದರು.

ಸದ್ಯ ಬಂಧಿಸಿರುವ ಉಗ್ರರ ಬಳಿ 5 ಪಿಸ್ತೂಲ್‌ಗಳು, 5 ಮ್ಯಾಗಜಿನ್‌ಗಳು, 50 ಗುಂಡುಗಳು ಸೇರಿದಂತೆ ಎರಡು ಹ್ಯಾಂಡ್ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.