ನವದೆಹಲಿ: ಒತ್ತುವರಿ ಮಾಡಿಕೊಂಡಿರುವವರು ತಮಗೆ ಪುನರ್ವಸತಿ ಕಲ್ಪಿಸಿಕೊಡುವವರೆಗೂ ಸಾರ್ವಜನಿಕ ಆಸ್ತಿಯ ಒತ್ತುವರಿಯನ್ನು ಮುಂದುವರಿಸುವ ಹಕ್ಕನ್ನು ಪಡೆಯಲು ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ದಕ್ಷಿಣ ದೆಹಲಿಯ ಕಾಲ್ಕಾಜಿಯಲ್ಲಿರುವ ಭೂಮಿಹೀನ್ ಕ್ಯಾಂಪ್‌ನಲ್ಲಿ ಒತ್ತುವರಿ ತೆರವು ಪ್ರಕ್ರಿಯೆಯನ್ನು ಕಾನೂನಿನ ಪ್ರಕಾರ ಮುಂದುವರಿಸುವ ಅಧಿಕಾರವನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ (ಡಿಡಿಎ) ನೀಡುವಾಗ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
‘ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತನ್ನಲ್ಲೇ ಇಟ್ಟುಕೊಂಡರೆ ಅದರಿಂದ ಸಾರ್ವಜನಿಕ ಯೋಜನೆಗಳಿಗೆ ಅಡ್ಡಿಯಾಗುತ್ತದೆ. ಆದ್ದರಿಂದ ಒತ್ತುವರಿ ಮಾಡಿಕೊಂಡ ಜಾಗದಲ್ಲಿ ವಾಸ ಮುಂದುವರಿಸಲು ಅರ್ಜಿದಾರರಿಗೆ ಯಾವುದೇ ಕಾನೂನುಬದ್ಧ ಹಕ್ಕು ಇಲ್ಲ’ ಎಂದು ನ್ಯಾಯಮೂರ್ತಿ ಧರ್ಮೇಶ್ ಶರ್ಮಾ ಅವರು ಜೂನ್ 6ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಒತ್ತುವರಿ ತೆರವು ಪ್ರಕ್ರಿಯೆ ಸ್ಥಗಿತಗೊಳಿಸಿ ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಮತ್ತು ಅರ್ಜಿದಾರರನ್ನು ಬಲವಂತವಾಗಿ ಹೊರಹಾಕದಂತೆ ಡಿಡಿಎಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಮಾರು 1,200 ಜನರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಭೂಮಿಹೀನ್ ಕ್ಯಾಂಪ್‌ನಲ್ಲಿರುವ ಸುಮಾರು ಮೂರು ದಶಕಗಳಷ್ಟು ಹಳೆಯದಾದ ಕೊಳೆಗೇರಿಯು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಿಂದ ವಲಸೆ ಬಂದವರಿಗೆ ನೆಲೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.