ADVERTISEMENT

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣ: ಯಂಗ್ ಇಂಡಿಯನ್‌ ಕಚೇರಿ ಆವರಣಕ್ಕೆ ಇ.ಡಿ ಬೀಗ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 14:49 IST
Last Updated 3 ಆಗಸ್ಟ್ 2022, 14:49 IST
ಯಂಗ್‌ ಇಂಡಿಯನ್‌ ಕಚೇರಿ ಆವರಣದಲ್ಲಿ ಇ.ಡಿ ಅಧಿಕಾರಿಗಳು ಬೀಗ ಹಾಕಿರುವುದು –ಪಿಟಿಐ ಚಿತ್ರ 
ಯಂಗ್‌ ಇಂಡಿಯನ್‌ ಕಚೇರಿ ಆವರಣದಲ್ಲಿ ಇ.ಡಿ ಅಧಿಕಾರಿಗಳು ಬೀಗ ಹಾಕಿರುವುದು –ಪಿಟಿಐ ಚಿತ್ರ    

ನವದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಹಣ ಅಕ್ರಮ ವರ್ಗಾವಣೆ ಸಂಬಂಧ ಯಂಗ್‌ ಇಂಡಿಯನ್‌ (ವೈಐ) ಕಚೇರಿ ಆವರಣಕ್ಕೆ ಬುಧವಾರ ತಾತ್ಕಾಲಿಕವಾಗಿ ಬೀಗ ಹಾಕಿದೆ.

‘ಮಂಗಳವಾರ ನಡೆದ ಶೋಧ ಕಾರ್ಯದ ವೇಳೆ ಯಂಗ್‌ ಇಂಡಿಯನ್‌ ಕಚೇರಿಗೆ ಸೇರಿದ ಯಾರೂ ಸ್ಥಳದಲ್ಲಿರಲಿಲ್ಲ. ಹೀಗಾಗಿ ಸಾಕ್ಷ್ಯಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಪುರಾವೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕಚೇರಿಯ ಆವರಣದಲ್ಲಿ ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ’ ಎಂದು ಇ.ಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾಂಗ್ರೆಸ್‌ ಒಡೆತನದ ‘ಹೆರಾಲ್ಡ್‌ ಹೌಸ್‌’ನಲ್ಲಿ ಕಚೇರಿ ಇದ್ದು, ‘ಪೂರ್ವಾನುಮತಿ ಇಲ್ಲದೆ ಯಾರೂ ಬೀಗ ತೆರೆಯುವಂತಿಲ್ಲ’ ಎಂದು ಸೂಚಿಸಲಾಗಿದೆ. ಈ ಸಂಬಂಧ ಭಿತ್ತಿಪತ್ರವೊಂದನ್ನು ಅಂಟಿಸಲಾಗಿದೆ.

ADVERTISEMENT

‘ಕಟ್ಟಡದಲ್ಲಿರುವ ಇತರ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲು ಯಾವುದೇ ಅಭ್ಯಂತರವಿಲ್ಲ’ ಎಂದು ಅಧಿಕಾರಿ ತಿಳಿಸಿದ್ದಾರೆ.

‘ಯಂಗ್‌ ಇಂಡಿಯನ್‌ ಕಚೇರಿಯ ಬಾಗಿಲು ತೆರೆದು ಶೋಧ ಕಾರ್ಯಕ್ಕೆ ಅನುವು ಮಾಡಿಕೊಡುವಂತೆ ಕಚೇರಿಯ ಅಧಿಕಾರಿಯೊಬ್ಬರಿಗೆ ಇ–ಮೇಲ್‌ ಮೂಲಕ ಸಂದೇಶ ಕಳುಹಿಸಲಾಗಿದೆ. ಅದಕ್ಕೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ಇ.ಡಿ ಹೇಳಿದೆ.

‘ಕಚೇರಿಯ ಅಧಿಕಾರಿಗಳು ಹಾಜರಾದಲ್ಲಿ ಇ.ಡಿ ಅಧಿಕಾರಿಗಳು ಶೋಧ ಕಾರ್ಯ ಪೂರ್ಣಗೊಳಿಸಲಿದ್ದಾರೆ. ಬಳಿಕ ಬೀಗವನ್ನೂ ತೆರವುಗೊಳಿಸಲಾಗುತ್ತದೆ’ ಎಂದು ಮೂಲಗಳು ತಿಳಿಸಿವೆ.

ಇ.ಡಿ ಅಧಿಕಾರಿಗಳು ಹೆರಾಲ್ಡ್‌ ಹೌಸ್‌ ಹಾಗೂ ಇತರ 11 ಸ್ಥಳಗಳಲ್ಲಿ ಮಂಗಳವಾರ ಶೋಧ ಕಾರ್ಯ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.