ಇಂಡಿಗೊ ವಿಮಾನ (ಪ್ರಾತಿನಿಧಿಕ ಚಿತ್ರ)
ಅಹಮದಾಬಾದ್: ದಿಯುಗೆ ಹೊರಟಿದ್ದ ಇಂಡಿಗೊ ವಿಮಾನದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಲಟ್ ತಕ್ಷಣವೇ ಮೇ ಡೇ ಘೋಷಿಸಿದ್ದರಿಂದ ಪ್ರಯಾಣ ರದ್ದುಗೊಳಿಸಲಾಗಿದೆ. ಇದರಿಂದಾಗಿ ಭಾರಿ ದುರಂತ ತಪ್ಪಿದಂತಾಗಿದೆ.
60 ಪ್ರಯಾಣಿಕರಿದ್ದ IG07966 ವಿಮಾನವು ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದಿಯುಗೆ ಬೆಳಿಗ್ಗೆ 11.15ಕ್ಕೆ ಹೊರಡಬೇಕಿತ್ತು. ಹಾರಾಟಕ್ಕಾಗಿ ಚಲಿಸುತ್ತಿದ್ದಾಗ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ, ವಿಮಾನ ಹಾರಾಟ ನಿಯಂತ್ರಕಕ್ಕೆ (ಎಟಿಸಿ) ಪೈಲಟ್ 'ಮೇ ಡೇ, ಮೇ ಡೇ' ಸಂದೇಶ ನೀಡಿದರು. ತಕ್ಷಣವೇ ಪ್ರಯಾಣ ಸ್ಥಗಿತಗೊಳಿಸಲಾಯಿತು. ವಿಮಾನದಲ್ಲಿದ್ದವರನ್ನು ತಕ್ಷಣವೇ ಕೆಳಗಿಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಇಂಡಿಗೊದಿಂದ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಅಹಮದಾಬಾದ್‌ನಲ್ಲಿ ಕಳೆದ ತಿಂಗಳು ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಪ್ರಯಾಣಿಕರು, ಸಿಬ್ಬಂದಿ ಹಾಗೂ ವಿಮಾನ ಪತನಗೊಂಡ ಕಟ್ಟಡದಲ್ಲಿದ್ದವರೂ ಸೇರಿದಂತೆ 260 ಮಂದಿ ಮೃತಪಟ್ಟಿದ್ದರು.
ಆಗಲೂ ಪೈಲಟ್ ಮೇ ಡೇ ಘೋಷಣೆ ಮಾಡಿದ್ದರು. ಆದರೆ, ಅಷ್ಟರಲ್ಲೇ ವಿಮಾನ ಪತನಗೊಂಡಿತ್ತು. ಆ ದುರಂತದ ಬೆನ್ನಲ್ಲೇ, ಇಂದು ಮತ್ತೊಂದು ಅಪಾಯ ಎದುರಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.