ನವದೆಹಲಿ: ‘ಭಾರತದಲ್ಲಿ ಸುಮಾರು 19,500 ಭಾಷೆಗಳು ಹಾಗೂ ಉಪಭಾಷೆಗಳು ಇವೆ. ಇವುಗಳಲ್ಲಿ ಸಂವಿಧಾನವು 22 ಭಾಷೆಗಳಿಗೆ ಅಧಿಕೃತ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಇದುವೆ ಭಾರತದ ವಿವಿಧತೆಯಲ್ಲಿ ಏಕತೆಯ ಮಂತ್ರ’ ಎಂದು ತೃಣಮೂಲ ಕಾಂಗ್ರೆಸ್‌ನ ಮುಖಂಡ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.
ದೇಶದಲ್ಲಿ ಭಾಷಾ ಸಂಘರ್ಷ ಏರುಮುಖವಾಗಿರುವ ಸಂದರ್ಭದಲ್ಲಿ ವಿಡಿಯೊ ಸಂದೇಶ ಬಿಡುಗಡೆ ಮಾಡಿರುವ ಅವರು, ‘ದೇಶದ ಶೇ 97ರಷ್ಟು ಜನರು ಅಧಿಕೃತ ಭಾಷೆಗಳಲ್ಲಿ ಒಂದನ್ನು ತಮ್ಮ ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇದನ್ನು ಎಂದಿಗೂ ಅರ್ಥ ಮಾಡಿಕೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇಂಗ್ಲಿಷ್ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವ ದಿನ ದೂರವಿಲ್ಲ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಈ ವಿಡಿಯೊ ಸಂದೇಶವನ್ನು ರಾಜ್ಯಸಭಾ ಸದಸ್ಯ ಬಿಡಗುಡೆ ಮಾಡಿದ್ದಾರೆ.
ಟಿಎಂಸಿಯ ಮತ್ತೊಬ್ಬ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ‘ಭಾರತೀಯರು ಯಾವುದೇ ಭಾಷೆಯ ಬಳಕೆಯನ್ನು ಅವಮಾನ ಎಂದುಕೊಳ್ಳಬಾರದು. ಭಾರತದಲ್ಲಿ ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯನ್ನಾಗಿ ಬಳಸಲಾಗುತ್ತಿದೆ. ಜಾಗತಿಕ ಜ್ಞಾನವನ್ನು ಪಡೆಯುವ ಲಕ್ಷಾಂತರ ಜನರ ಮಹತ್ವಾಕಾಂಕ್ಷೆಯ ಉದ್ದೇಶ ಇದರ ಹಿಂದಿದೆ. ಹೀಗಾಗಿ ಭಾರತೀಯರು ಯಾವುದೇ ಭಾಷೆಯ ಕುರಿತು ಕೀಳಿರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ’ ಎಂದಿದ್ದಾರೆ.
ಸಂವಿಧಾನದ 8ನೇ ಪರಿಚ್ಛೇಧದಲ್ಲಿರುವ 22 ಭಾಷೆಗಳ ಪಟ್ಟಿಯಲ್ಲಿ ಅಸ್ಸಾಮಿ, ಬೆಂಗಾಳಿ, ಬೊಡೊ, ಡೊಗ್ರಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಳ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು ಮತ್ತು ಉರ್ದು ಸೇರಿವೆ.
1950ರಲ್ಲಿ ಸಂವಿಧಾನ ಅಂಗೀಕಾರಗೊಂಡ ಸಂದರ್ಭದಲ್ಲಿ 343ನೇ ವಿಧಿಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಮತ್ತು ಇಂಗ್ಲಿಷ್ ಅನ್ನು ಹೆಚ್ಚುವರಿ ಅಧಿಕೃತ ಭಾಷೆಯಾಗಿ ಗರಿಷ್ಠ 15 ವರ್ಷಗಳವರೆಗೆ ಮಾತ್ರ ಬಳಸಬೇಕು ಎಂದು ಹೇಳಲಾಗಿದೆ. 1963ರ ಅಧಿಕೃತ ಭಾಷಾ ಕಾಯ್ದೆಯಲ್ಲಿ ಇಂಗ್ಲಿಷ್ ಅನ್ನು ಹಿಂದಿಯ ಜತೆಯಲ್ಲಿ ಅಧಿಕೃತ ಭಾಷೆಯಾಗಿ ಬಳಸಬಹುದು ಎಂದು ಹೇಳಲಾಗಿತ್ತು. ಇದು 1965ರ ಜ. 26ರಿಂದ ಜಾರಿಗೆ ಬಂದಿತು.
ಸಂಸತ್ತಿನ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದ ಅಧಿಕೃತ ಉದ್ದೇಶಗಳಿಗೆ ಇಂಗ್ಲಿಷ್ ಅನ್ನು ಬಳಸಬಹುದು ಎಂದು ಹೇಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯವಹಾರಕ್ಕೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು ಎಂದೂ ಈ ಕಾಯ್ದೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.