ADVERTISEMENT

ಚೀತಾಗಳು ಒಗ್ಗಿಕೊಳ್ಳುವವರೆಗೆ ಉದ್ಯಾನದೊಳಗೆ ನನ್ನನ್ನೂ ಬಿಡಬೇಡಿ: ಮೋದಿ

ಪಿಟಿಐ
Published 18 ಸೆಪ್ಟೆಂಬರ್ 2022, 2:10 IST
Last Updated 18 ಸೆಪ್ಟೆಂಬರ್ 2022, 2:10 IST
'ಚೀತಾ ಮಿತ್ರ'ರೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)
'ಚೀತಾ ಮಿತ್ರ'ರೊಂದಿಗೆ ಸಮಾಲೋಚನೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ (ಪಿಟಿಐ ಚಿತ್ರ)   

ಶಯೋಪುರ (ಮಧ್ಯಪ್ರದೇಶ): 'ಚೀತಾ ಯೋಜನೆ' ಅಡಿ ನಮೀಬಿಯಾದಿಂದ ತರಲಾದ ಚೀತಾಗಳನ್ನುಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ (ಕೆಎನ್‌ಪಿ) ಶನಿವಾರ ಬಿಡುಗಡೆ ಮಾಡಿದ್ದಾರೆ.

ಬಳಿಕ 'ಚೀತಾ ಮಿತ್ರ'ರೊಂದಿಗೆ ಸಮಾಲೋಚನೆ ನಡೆಸಿದಮೋದಿ, ಚೀತಾಗಳನ್ನು ರಕ್ಷಿಸಿ. ಮಾನವ–ಪ್ರಾಣಿ ಸಂಘರ್ಷವನ್ನು ನಿಯಂತ್ರಿಸಿ.ಈ ಪ್ರಾಣಿಗಳು ತಮ್ಮ ಹೊಸ ಆವಾಸಸ್ಥಾನಕ್ಕೆ ಒಗ್ಗಿಕೊಳ್ಳುವವರೆಗೆ ಯಾರೊಬ್ಬರನ್ನೂಕೆಎನ್‌ಪಿ ಒಳಗೆ ಬಿಡಬೇಡಿ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಏಳು ದಶಕಗಳ ಹಿಂದೆಯೇ ಚೀತಾಗಳು ನಿರ್ನಾಮವಾಗಿವೆ. ದೇಶದಲ್ಲಿ ಚೀತಾಗಳ ಸಂತತಿಯನ್ನು ಬೆಳೆಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.

ADVERTISEMENT

ಒಟ್ಟು 8 ಚೀತಾಗಳನ್ನು (ಐದು ಹೆಣ್ಣು ಮತ್ತು ಮೂರು ಗಂಡು) ನಮೀಬಿಯಾದಿಂದ ಗ್ವಾಲಿಯರ್‌ಗೆ ಬೋಯಿಂಗ್ ವಿಮಾನದಲ್ಲಿ ಶನಿವಾರ ಕರೆತರಲಾಗಿದೆ. ಈ ಪ್ರಾಣಿಗಳನ್ನು ಕರೆತರಲು ಅನುಕೂಲವಾಗುವಂತೆ ವಿಮಾನವನ್ನು ಮಾರ್ಪಾಡು ಮಾಡಲಾಗಿತ್ತು. ವನ್ಯ ಮೃಗಗಳ ಅಂತರ್ ಖಂಡ ಸ್ಥಳಾಂತರದ ಮೊದಲ ಯೋಜನೆ ಇದಾಗಿದೆ.

ಚೀತಾ ಬಿಡುಗಡೆಗೊಳಿಸಿ ಮಾತನಾಡಿರುವ ಪ್ರಧಾನಿ, 'ಇಲ್ಲಿ ರಚಿಸಲಾಗಿರುವ ಆವರಣಕ್ಕೆ ಚೀತಾಗಳು ಒಗ್ಗಿಕೊಳ್ಳಲು ಸಮಯ ಬೇಕಾಗುತ್ತದೆ. ನಂತರ ಅವು ಅರಣ್ಯಕ್ಕೆ ಒಗ್ಗಿಕೊಳ್ಳಬೇಕಿದೆ ಎಂಬುದು ನಿಮಗೆ ತಿಳಿದಿರಬೇಕು. ರಾಜಕೀಯ ನಾಯಕರು, ಮಾಧ್ಯಮದವರು, ಅಧಿಕಾರಿಗಳು, ಸಂಬಂಧಿಕರು ಅಷ್ಟೇಯೇಕೆ ನನಗೂ ಉದ್ಯಾನದೊಳಗೆ ಪ್ರವೇಶ ನಿರಾಕರಿಸುವುದು ನಿಮ್ಮ ಕರ್ತವ್ಯ' ಎಂದು'ಚೀತಾ ಮಿತ್ರ'ರಿಗೆ ಹೇಳಿದ್ದಾರೆ.

ಒಂದು ವೇಳೆ ನಾನು ಹಾಗೂ ನನ್ನ ಸಂಬಂಧಿಕರು ಬಂದರೂ, ಉದ್ಯಾನದೊಳಕ್ಕೆ ಪ್ರವೇಶ ನಿರಾಕರಿಸಿ. ಚೀತಾಗಳು ಇಲ್ಲಿನ ಆವಾಸಸ್ಥಾನಕ್ಕೆ ಒಗ್ಗಿಕೊಂಡ ಬಳಿಕ ಕೆಎನ್‌ಪಿ ಒಳಗೆ ಪ್ರವೇಶ ನೀಡಲಾಗುವುದು ಎಂದು ಜನರಿಗೆ ಮನವರಿಕೆ ಮಾಡುವಂತೆ ಕಿವಿಮಾತು ಹೇಳಿದ್ದಾರೆ.

ಭಾರತದಲ್ಲಿ ಚೀತಾ ಸಂತತಿಯು ಏಳು ದಶಕದ ಹಿಂದೆಯೇ ನಿರ್ನಾಮವಾಗಿದ್ದರೂ ಬೇರೆ ದೇಶಗಳಿಂದ ಚೀತಾಗಳನ್ನು ಕರೆತರಲು ಗಂಭೀರ ಪ್ರಯತ್ನ ನಡೆಯಲೇ ಇಲ್ಲ ಎಂದು ಹಿಂದಿನ ಸರ್ಕಾರಗಳನ್ನು ಟೀಕಿಸಿರುವ ಮೋದಿ,'ಬಹುಶಃ ವಿಶ್ವದಲ್ಲೇ ಮೊದಲ ಬಾರಿಗೆ ‌130 ಕೋಟಿ ಜನರು 75 ವರ್ಷಗಳ ಬಳಿಕ ಚೀತಾಗಳ ಆಗಮನವನ್ನು ಸಂಭ್ರಮಿಸುತ್ತಿದ್ದಾರೆ' ಎಂದು ಹೇಳಿಕೊಂಡಿದ್ದಾರೆ.

ಚೀತಾ ಮಿತ್ರರು ಇತರ ವನ್ಯಜೀವಿಗಳನ್ನೂ ರಕ್ಷಿಸಬೇಕು. ನಿಮ್ಮ ಮೊಬೈಲ್‌ಗಳ ಮೂಲಕ ವನ್ಯಜೀವಿಗಳ ಫೋಟೊಗಳನ್ನು ಕ್ಲಿಕ್ ಮಾಡುವ ಹವ್ಯಾಸ ಬೆಳೆಸಿಕೊಳ್ಳಿ. ಫೋಟೊಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಯಾರು ಈ ಚೀತಾ ಮಿತ್ರರು?
'ಚೀತಾ ಮಿತ್ರರು' ಎಂಬುದು ಮಾಂಸಾಹಾರಿ ಪ್ರಾಣಿಗಳಾದ ಚೀತಾಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ಎಚ್ಚರಿಕೆ ವಹಿಸುವ ಸಲುವಾಗಿ ತರಬೇತಿ ನೀಡಲಾಗಿರುವ 400 ಯುವಕರ ತಂಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.