ADVERTISEMENT

ಎಥೆನಾಲ್‌ ಮಿಶ್ರಿತ ಪೆಟ್ರೋಲ್‌: ಪಿಐಎಲ್‌ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಪಿಟಿಐ
Published 1 ಸೆಪ್ಟೆಂಬರ್ 2025, 14:53 IST
Last Updated 1 ಸೆಪ್ಟೆಂಬರ್ 2025, 14:53 IST
ಸುಪ್ರೀಂಕೋರ್ಟ್‌
ಸುಪ್ರೀಂಕೋರ್ಟ್‌   

ನವದೆಹಲಿ: ದೇಶದಾದ್ಯಂತ ಶೇ 20ರಷ್ಟು ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ (ಇಬಿಪಿ–20) ಬಳಕೆ ಜಾರಿಗೊಳಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್‌ ಸೋಮವಾರ ವಜಾಗೊಳಿಸಿದೆ.

‘ಇಬಿಪಿ–20‘ ಮೂಲಕ ದೇಶದ ಲಕ್ಷಾಂತರ ಸವಾರರನ್ನು ತಮ್ಮ ವಾಹನಗಳ ಎಂಜಿನ್‌ಗೆ ಹೊಂದಿಕೆಯಾದ ಇಂಧನ ಬಳಸುವಂತೆ ಒತ್ತಾಯಿಸಲಾಗುತ್ತಿದೆ' ಎಂದು ವಕೀಲ ಅಕ್ಷಯ್‌ ಮಲ್ಹೋತ್ರಾ ಎಂಬವರು ಪಿಐಎಲ್‌ ಸಲ್ಲಿಸಿದ್ದರು. 

‘ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಎಥೆನಾಲ್‌ ಮುಕ್ತ ಪೆಟ್ರೋಲ್‌ ಲಭ್ಯತೆಯನ್ನು ಖಾತ್ರಿಪಡಿಸುವ’ ಲೇಬಲ್‌ ಪ್ರದರ್ಶಿಸುವಂತೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಮತ್ತು ಕೆ.ವಿನೋದ್‌ ಚಂದ್ರನ್ ಅವರನ್ನೊಳಗೊಂಡ ಪೀಠ ತಿರಸ್ಕರಿಸಿತು.    

ADVERTISEMENT

‘ಕೇಂದ್ರದ ಪರವಾಗಿ ಹಾಜರಾದ ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರು, ‘ಪಿಐಎಲ್‌’ಗೆ ವಿರೋಧ ವ್ಯಕ್ತಪಡಿಸಿ, ಎಥೆನಾಲ್‌ ಮಿಶ್ರಿತ ಪೆಟ್ರೋಲ್‌ನಿಂದ ಕಬ್ಬು ಬೆಳೆಗಾರರಿಗೆ ಅನುಕೂಲವಾಗುತ್ತದೆ ಎಂದು ಪೀಠದ ಗಮನಕ್ಕೆ ತಂದರು. 

‘ಪಿಐಎಲ್‌’ ಸಲ್ಲಿಸಿರುವ ವಕೀಲರು ಬೇನಾಮಿ. ಇವರ ಹಿಂದೆ ಬೇರೆ ಲಾಬಿ ಇದೆ. ‘ಇಬಿಪಿ–20‘ಗೆ ಸಂಬಂಧಿಸಿಂತೆ ಸರ್ಕಾರ ಪ್ರತಿಯೊಂದು ಸಂಗತಿಯನ್ನೂ ವಿವೇಚಿಸುತ್ತದೆ’ ಎಂದು ಅಟಾರ್ನಿ ಜನರಲ್‌ ಪೀಠಕ್ಕೆ ತಿಳಿಸಿದರು.  

ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಶಾದನ್‌ ಫರ್ಸಾತ್‌ ಅವರು, ‘ಈಗಿರುವ  ಬಹಳಷ್ಟು ವಾಹನಗಳನ್ನು ಇಬಿಪಿ–20ಗೆ ಹೊಂದಿಕೆಯಾಗುವಂತೆ ನಿರ್ಮಿಸಿಲ್ಲ. ಹೀಗಾಗಿ ‘ಇಬಿಪಿ–20‘ ಬಳಸುವಂತೆ ಸವಾರರನ್ನು ಒತ್ತಾಯಿಸುವುದು ವಾಹನಗಳ ಇಂಧನ ಕ್ಷಮತೆ (ಮೈಲೇಜ್‌) ಕಡಿಮೆಯಾದರೂ ಒಪ್ಪಿಕೊಳ್ಳುವಂತೆ ಒತ್ತಾಯ ಹೇರುತ್ತದೆ. ಹೀಗಾಗಿ ಎಲ್ಲ ಪೆಟ್ರೋಲ್‌ ಬಂಕ್‌ಗಳಲ್ಲಿ ಎಥೆನಾಲ್‌ ಮುಕ್ತ ಪೆಟ್ರೋಲ್‌’ನ ಲೇಬಲ್‌ ಕಡ್ಡಾಯವಾಗಿ ಪ್ರದರ್ಶಿಸುವಂತೆ, ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.