
ಇಥಿಯೋಪಿಯಾ ಜ್ವಾಲಾಮುಖಿ
(ಚಿತ್ರ ಕೃಪೆ: X/@theinformant_x)
ನವದೆಹಲಿ: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ಬೂದಿ ಮಿಶ್ರಿತ ದಟ್ಟವಾದ ಮೋಡದ ರೀತಿಯ ಹೊಗೆಯು ಇಂದು (ಸೋಮವಾರ) ರಾತ್ರಿಯ ವೇಳೆಗೆ ಭಾರತದ ವಾತಾವರಣ ವ್ಯಾಪ್ತಿಯಿಂದ ದೂರ ಸರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಇಥಿಯೋಪಿಯಾದಲ್ಲಿ 'ಹೈಲಿಗುಬ್ಬಿ' ಜ್ವಾಲಾಮುಖಿ ಸ್ಫೋಟದಿಂದ ಉಂಟಾದ ದಟ್ಟವಾದ ಮೋಡದ ರೀತಿಯ ಹೊಗೆಯು ದೇಶದ ವಿಮಾನಯಾನ ಕಾರ್ಯಾಚರಣೆಗೆ ಅಡಚಣೆಯನ್ನುಂಟು ಮಾಡಿದೆ.
ಇಂದು ಗುಜರಾತ್, ದೆಹಲಿ-ಎನ್‌ಸಿಆರ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಮೇಲೆ ಇದರ ಪ್ರಭಾವವು ಇರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೂದಿ ಮಿಶ್ರಿತ ಮೋಡಗಳು ಚೀನಾ ಕಡೆಗೆ ವ್ಯಾಪಿಸುತ್ತಿದ್ದು, ರಾತ್ರಿ 7.30ರ ವೇಳೆಗೆ ಭಾರತದ ಆಕಾಶ ಪರಿಧಿಯಿಂದ ದೂರ ಸರಿಯಲಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.
ಇಥಿಯೋಪಿಯಾದ ಅಫಾರ್ ಪ್ರದೇಶದಲ್ಲಿ ಜ್ವಾಲಾಮುಖಿ ಹೊರಹೊಮ್ಮಿ, ಬೂದಿ ಮಿಶ್ರಿತ ಹೊಗೆಯು ಸುಮಾರು 14 ಕಿ.ಮೀ. (45 ಸಾವಿರ ಅಡಿ) ಎತ್ತರಕ್ಕೆ ವ್ಯಾಪಿಸಿತ್ತು ಎಂದು ಐಎಂಡಿ ಹೇಳಿದೆ. ಈ ಮೋಡಗಳು ಕೆಂಪು ಸಮುದ್ರ, ಅರೇಬಿಯನ್ ಪೆನಿನ್ಸುಲಾ ಹಾಗೂ ಭಾರತೀಯ ಉಪಖಂಡದತ್ತ ವ್ಯಾಪಿಸಿತ್ತು.
ಕೆಂಪು ಸಮುದ್ರದಿಂದ ಯೆಮೆನ್, ಒಮಾನ್ ಮತ್ತು ಅರೆಬ್ಬೀ ಸಮುದ್ರದಿಂದ ಪಶ್ಚಿಮ ಮತ್ತು ಉತ್ತರ ಭಾರತದತ್ತ ವ್ಯಾಪಿಸಿತ್ತು ಎಂದು ಐಎಂಡಿ ಹೇಳಿದೆ.
ಉಪಗ್ರಹ ಚಿತ್ರಣ ಹಾಗೂ ವೋಲ್ಕನಿಕ್ ಆ್ಯಶ್ ಅಡ್ವೈಸರಿ ಸೆಂಟರ್‌ಗಳಿಂದ (ವಿಎಎಸಿ) ಇದರ ಮೇಲೆ ನಿಗಾ ಇರಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಹಲವು ಹಲವು ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿವೆ. ಇದರಿಂದಾಗಿ ವಿಮಾನಯಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಈ ಮುನ್ನ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳು ಮುನ್ನಚ್ಚೆರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೂಚನೆ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.