ADVERTISEMENT

ರಷ್ಯಾದ ಮೇಲೆ ಐರೋಪ್ಯ ಒಕ್ಕೂಟ ನಿರ್ಬಂಧ

ರೋಸ್ನೆಫ್ಟ್ ಭಾರತೀಯ ತೈಲ ಸಂಸ್ಕರಣಾ ಘಟಕಕಕ್ಕೂ ತಟ್ಟಿದ ಬಿಸಿ

ಪಿಟಿಐ
Published 18 ಜುಲೈ 2025, 15:58 IST
Last Updated 18 ಜುಲೈ 2025, 15:58 IST
ತೈಲ ಸಂಸ್ಕರಣ ಘಟಕ–ಎಎಫ್‌ಪಿ ಚಿತ್ರ
ತೈಲ ಸಂಸ್ಕರಣ ಘಟಕ–ಎಎಫ್‌ಪಿ ಚಿತ್ರ   

ನವದೆಹಲಿ: ರಷ್ಯಾಕ್ಕೆ ಬಿಸಿ ಮುಟ್ಟಿಸಿರುವ ಐರೋಪ್ಯ ಒಕ್ಕೂಟವು ರಷ್ಯಾದ ‘ರೋಸ್ನೆಫ್ಟ್‌’ ತೈಲ ಸಂಸ್ಕರಣಾ ಘಟಕದ ಮೇಲೆ ನಿರ್ಬಂಧ ಹೇರಿದೆ. ರಷ್ಯಾದ ಕಚ್ಚಾತೈಲದಿಂದ ತಯಾರಿಸಿದ ಇಂಧನಗಳ ಮೇಲೆ ಹೊಸದಾಗಿ ನಿರ್ಬಂಧ ಹೇರಿ ಕ್ರಮ ಕೈಗೊಂಡಿದೆ. ಒಕ್ಕೂಟದ ಸದಸ್ಯ ರಾಷ್ಟ್ರವಾಗಿರುವ ಉಕ್ರೇನ್‌ ವಿರುದ್ಧ ರಷ್ಯಾ ಯುದ್ಧದಿಂದ ಹಿಂದೆ ಸರಿಯದ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ನಷ್ಟಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಡಿಮೆ ಬೆಲೆಗೆ ರಷ್ಯಾವು ಕಚ್ಚಾತೈಲ ಮಾರಾಟ ಮಾಡುತ್ತಿದೆ. ರಷ್ಯಾದ ಎರಡನೇ ಅತೀ ದೊಡ್ಡ ಕಚ್ಚಾತೈಲ ಖರೀದಿದಾರ ರಾಷ್ಟ್ರವಾಗಿರುವ ಭಾರತಕ್ಕೂ ದೊಡ್ಡ ಪ್ರಮಾಣದಲ್ಲಿ ಲಾಭವಾಗುತ್ತಿದೆ. ದೇಶದ ಒಟ್ಟು ಕಚ್ಚಾ ತೈಲದ ಆಮದು ಪೈಕಿ ಶೇಕಡ 40ರಷ್ಟನ್ನು ರಷ್ಯಾದಿಂದಲೇ ತರಿಸಿಕೊಳ್ಳಲಾಗುತ್ತಿದೆ.

‘ನಾವು ಇದೇ ಮೊದಲ ಸಲ ಭಾರತದಲ್ಲಿರುವ ‘ರೋಸ್ನೆಫ್ಟ್‌’ ತೈಲ ಸಂಸ್ಕರಣಾ ಘಟಕದ ಮೇಲೂ ನಿರ್ಬಂಧ ವಿಧಿಸುತ್ತಿದ್ದೇವೆ’ ಎಂದು ಐರೋಪ್ಯ ಒಕ್ಕೂಟದ ವಿದೇಶಾಂಗ ನೀತಿಯ ಮುಖ್ಯಸ್ಥ ಕಾಜಾ ಕಲ್ಲಾಸ್‌ ‘ಎಕ್ಸ್‌’ನಲ್ಲಿ ತಿಳಿಸಿದ್ದಾರೆ.

ADVERTISEMENT

ನಯಾರಾ ಎನರ್ಜಿ ಲಿಮಿಟೆಡ್‌ನಲ್ಲಿ ‘ರೋಸ್ನೆಫ್ಟ್‌’ ಕಂಪನಿಯು ಶೇ 49.13ರಷ್ಟು ಪಾಲನ್ನು ಹೊಂದಿದೆ. ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿರುವ ವಡಿನಾರ್‌ನಲ್ಲಿರುವ ತೈಲ ಸಂಸ್ಕರಣಾ ಘಟಕದಲ್ಲಿ ವರ್ಷಕ್ಕೆ 2 ಕೋಟಿ ಟನ್‌ನಷ್ಟು ಕಚ್ಚಾ ತೈಲವನ್ನು ಸಂಸ್ಕರಣೆ ಮಾಡಲಾಗುತ್ತದೆ. ನಯಾರಾ ಸಂಸ್ಥೆಯು ದೇಶದಾದ್ಯಂತ 6,750 ಪೆಟ್ರೋಲ್‌ ಪಂಪ್‌ಗಳನ್ನು ಹೊಂದಿದೆ.

ಐರೋಪ್ಯ ಒಕ್ಕೂಟದ ನಿರ್ಬಂಧದಿಂದ ನಯಾರಾ ಸಂಸ್ಥೆಯು ಯುರೋಪ್‌ನ ಯಾವುದೇ ರಾಷ್ಟ್ರಗಳಿಗೆ ಪೆಟ್ರೋಲ್, ಡೀಸೆಲ್‌ ಅನ್ನು ರಫ್ತು ಮಾಡುವಂತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.