ADVERTISEMENT

ಅಂಬೇಡ್ಕರ್ ಇದ್ದಿದ್ದರೆ ಅವರನ್ನೂ ಬಿಜೆಪಿಯವರು ಪಾಕ್ ಪರ ಎನ್ನುತ್ತಿದ್ದರು: ಮುಫ್ತಿ

ಪಿಟಿಐ
Published 13 ಜೂನ್ 2021, 11:03 IST
Last Updated 13 ಜೂನ್ 2021, 11:03 IST
ಮೆಹಬೂಬಾ ಮುಫ್ತಿ
ಮೆಹಬೂಬಾ ಮುಫ್ತಿ   

ಶ್ರೀನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಇದ್ದಿದ್ದರೆ ಅವರನ್ನೂ ಪಾಕಿಸ್ತಾನ ಪರವಾಗಿದ್ದಾರೆ ಎಂದು ಬಿಜೆಪಿಯು ಅಪಪ್ರಚಾರ ಮಾಡುತ್ತಿತ್ತು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

'ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿರುವ ಬಗ್ಗೆ ಮರುಚಿಂತನೆ ನಡೆಸಬಹುದು' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಕೆಂಡ

ಅಂಬೇಡ್ಕರ್ ರಚಿಸಿದ ಸಂವಿಧಾನದ 370ನೇ ವಿಧಿಯಲ್ಲಿ ಕಾಶ್ಮೀರಕ್ಕೆ ವಿಶೇಷ ಅಧಿಕಾರವನ್ನು ನೀಡಲಾಗಿತ್ತು. ಆದರೆ ಈ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ನಾಶಗೊಳಿಸಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಕಾಂಗ್ರೆಸ್ ಪಕ್ಷದ ಹಾಗೂ ನಾಯಕರು ಪಾಕಿಸ್ತಾನದ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಇದರ ಭಾಗವಾಗಿ ದಿಗ್ವಿಜಯ್ ಸಿಂಗ್ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಜತೆಗೂ ಮೈತ್ರಿ ಮಾಡಿಕೊಂಡಿದ್ದ ಮೆಹಬೂಬಾ ಮುಫ್ತಿ, ಈಗ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ. 'ದೇವರಿಗೆ ಧನ್ಯವಾದಗಳು, ಅಂಬೇಡ್ಕರ್ ಈಗ ಜೀವಂತವಾಗಿಲ್ಲ, ಇಲ್ಲದಿದ್ದರೆ ಅವರನ್ನು ಪಾಕಿಸ್ತಾನ ಪರ ಎಂದು ಬಿಜೆಪಿಯವರು ದೂಷಿಸುತ್ತಿದ್ದರು' ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.

'ಕ್ಲಬ್‌ಹೌಸ್‌' ಆಡಿಯೊ ಸಂವಾದದಲ್ಲಿ ಪಾಕಿಸ್ತಾನದ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ದಿಗ್ವಿಜಯ್ ಸಿಂಗ್, 'ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ತೆಗೆದು ಹಾಕಿರುವ ನಿರ್ಧಾರ ಅತ್ಯಂತ ದುಃಖಕರವಾದುದು, ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಮರುಚಿಂತನೆ ಮಾಡುತ್ತಿತ್ತು' ಎಂದು ಹೇಳಿದ್ದರು.

2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.