ADVERTISEMENT

ಜೈಲಿಗೆ ಹಾಕಿದರೂ, ಅಲ್ಲಿಂದಲೇ ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ: ಮಮತಾ

ಪಿಟಿಐ
Published 25 ನವೆಂಬರ್ 2020, 11:05 IST
Last Updated 25 ನವೆಂಬರ್ 2020, 11:05 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಬಂಕುರ (ಪಶ್ಚಿಮ ಬಂಗಾಳ): ‘ಬಿಜೆಪಿಗಾಗಲಿ ಇನ್ನಾವುದೇ ಸಂಸ್ಥೆಗಳಿಗಾಗಲಿ ನಾನು ಅಂಜುವುದಿಲ್ಲ. ಅವರಿಗೆ (ಬಿಜೆಪಿ) ತಾಕತ್ತಿದ್ದರೆ ನನ್ನನ್ನು ಬಂಧಿಸಿ, ಕಂಬಿಗಳ ಹಿಂದೆ ಕೂರಿಸಲಿ. ಜೈಲಿನಿಂದಲೇ ಚುನಾವಣೆ ಎದುರಿಸುತ್ತೇನೆ. ಟಿಎಂಸಿ ಪಕ್ಷ ಗೆಲ್ಲುವುದು ಖಚಿತ'ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದರು.

‘ಕೋವಿಡ್‌ 19‘ ನಂತರದ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಮಾತಿನ ಉದ್ದಕ್ಕೂ ಬಿಜೆಪಿ ವಿರುದ್ಧ ಹಾಗೂ ಪಕ್ಷಾಂತರ ಮಾಡಲು ಸಿದ್ಧವಾಗಿರುವ ತಮ್ಮ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಹರಿ ಹಾಯ್ದರು.

ಬಿಜೆಪಿಯನ್ನು ‘ಸುಳ್ಳಿನ ಕಸ'ಮತ್ತು ‘ರಾಷ್ಟ್ರಕ್ಕೆ ಅತಿ ದೊಡ್ಡ ಶಾಪ‘ ಎಂದು ಜರಿದ ಮಮತಾ, ‘ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ, ಜೈಲಿನಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಿ, ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ‘ ಎಂದರು.

ADVERTISEMENT

ಟಿಎಂಸಿ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುವ ಮೂಲಕ ಬಿಜೆಪಿ ಜನಪ್ರತಿನಿಧಿಗಳನ್ನು ಬೇಟೆಯಾಡಲು ಹೊರಟಿದೆ ಎಂದು ಆರೋಪಿಸಿದ ಮಮತಾ, ‘ಈ ಬಾರಿ ಕೇಸರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಿಂದ ಅನೇಕರು ಬೇಲಿಯ ಮೇಲೆ ಕುಳಿತವರಂತೆ ವರ್ತಿಸುತ್ತಿದ್ದಾರೆ‘ ಎಂದು ಯಾರನ್ನೂ ಹೆಸರಿಸದೇ ಆಕ್ರೋಶ ವ್ಯಕ್ತಪಡಿಸಿದರು.

'ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಅದು ಸುಳ್ಳುಗಳ ಕಸ. ಚುನಾವಣೆ ಬಂದಾಗಲೆಲ್ಲ, ‘ಸ್ಟಿಂಗ್ ಆಪರೇಷನ್‌‘ ಮತ್ತು ಹಗರಣಗಳ ವಿಷಯವನ್ನು ಮುಂದಿಟ್ಟುಕೊಂಡು ಟಿಎಂಸಿ ಪಕ್ಷದ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಾರೆ‘ ಎಂದು ದೂರಿದರು.

ಇತ್ತೀಚೆಗಷ್ಟೇ ಮುಗಿದ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿದ ಬ್ಯಾನರ್ಜಿ, ‘ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಅವರನ್ನು ಜೈಲಿಗೆ ಹಾಕಿಸಿದರೂ, ಆ ಪಕ್ಷ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಮೋಸದಿಂದಲೇ ಹೊರತು, ಜನ ಮನ್ನಣೆಯಿಂದಲ್ಲ‘ ಎಂದು ಹೇಳಿದರು.

294 ಸದಸ್ಯರನ್ನು ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.