ADVERTISEMENT

ಚಟರ್ಜಿ ಪ್ರಕರಣ | ಶಿಕ್ಷೆ ಪ್ರಮಾಣ ಕಡಿಮೆ ಏಕೆ?: ಇ.ಡಿಗೆ ಸುಪ್ರೀಂ ಕೋರ್ಟ್ ಚಾಟಿ

ಪಿಟಿಐ
Published 27 ನವೆಂಬರ್ 2024, 13:41 IST
Last Updated 27 ನವೆಂಬರ್ 2024, 13:41 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಇರುವ ವಿಚಾರವಾಗಿ ಸುಪ್ರೀಂ ಕೋರ್ಟ್‌, ಜಾರಿ ನಿರ್ದೇಶನಾಲಯವನ್ನು (ಇ.ಡಿ) ಬುಧವಾರ ಪ್ರಶ್ನಿಸಿದೆ.

ಪಶ್ಚಿಮ ಬಂಗಾಳ ಮಾಜಿ ಸಚಿವ ಪಾರ್ಥ ಚಟರ್ಜಿ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ಇ.ಡಿ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್(ಎಎಸ್‌ಜಿ) ಎಸ್‌.ವಿ.ರಾಜು ಅವರನ್ನು ಈ ಕುರಿತು ಪ್ರಶ್ನಿಸಿದ ಸುಪ್ರೀಂ ಕೋರ್ಟ್‌, ‘ಶಿಕ್ಷೆ ಪ್ರಮಾಣ ಶೇ 60–70ರಷ್ಟು ಇದ್ದರೂ, ಅದು ಕಳಪೆ ಸಾಧನೆಯೇ’ ಎಂದು ಹೇಳಿದೆ.

ಶಾಲಾ ನೇಮಕಾತಿಯಲ್ಲಿ ಆಗಿದೆ ಎನ್ನಲಾದ ಭ್ರಷ್ಟಾಚಾರ ಜೊತೆ ನಂಟಿನ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಪಾರ್ಥ ಚಟರ್ಜಿ ಅವರನ್ನು 2022ರ ಜುಲೈ 23ರಂದು ಇ.ಡಿ ಬಂಧಿಸಿತ್ತು.

ADVERTISEMENT

ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ಉಜ್ಜಲ್‌ ಭುಯಾನ್ ಅವರು ಇದ್ದ ನ್ಯಾಯಪೀಠ, ಚಟರ್ಜಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿತು.

‘ಪಾರ್ಥ ಚಟರ್ಜಿ ಅವರು ಎರಡು ವರ್ಷಕ್ಕೂ ಹೆಚ್ಚು ಸೆರೆವಾಸದಲ್ಲಿದ್ದಾರೆ. ಪ್ರಕರಣದ ವಿಚಾರಣೆ ಇನ್ನೂ ಆರಂಭವಾಗಬೇಕಿದೆ. ಪರಿಸ್ಥಿತಿ ಹೀಗಿರುವಾಗ ಇನ್ನೂ ಎಷ್ಟು ವರ್ಷ ಅವರು ಜೈಲಿನಲ್ಲಿರಬೇಕು’ ಎಂದು ಎಎಸ್‌ಜಿ ರಾಜು ಅವರನ್ನು  ಪೀಠವು ಪ್ರಶ್ನಿಸಿದೆ.

‘ಪಾರ್ಥ ಚಟರ್ಜಿ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿರುವುದನ್ನು ನಿರ್ಲಕ್ಷಿಸುವಂತಿಲ್ಲ. ಹಾಗಂತ ಅವರನ್ನು ಎಷ್ಟು ದಿನ ಜೈಲಿನಲ್ಲಿರಿಸುವುದು? ಅವರಿಗೆ ಜಾಮೀನು ನೀಡದಿದ್ದರೆ ಏನಾಗುತ್ತದೆ’ ಎಂದೂ ಪ್ರಶ್ನಿಸಿದೆ.

‘ಈ ಪ್ರಕರಣದಲ್ಲಿ 183 ಸಾಕ್ಷಿಗಳಿದ್ದು, ವಿಚಾರಣೆಯೂ ಆರಂಭವಾಗಿಲ್ಲ. ಈಗಾಗಲೇ 2.5– 3 ವರ್ಷ ಕಳೆದಿದ್ದು, ಇದು ಅಲ್ಪ ಅವಧಿಯೂ ಅಲ್ಲ. ವಿಚಾರಣೆ ಪೂರ್ಣಗೊಂಡು ಅಂತಿಮವಾಗಿ ಅವರಿಗೆ ಶಿಕ್ಷೆಯಾಗದಿದ್ದರೆ ಏನಾಗಬಹುದು? ಎಂದು ಜಾರಿ ನಿರ್ದೆಶನಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.

ಚಟರ್ಜಿ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್‌ ರೋಹ್ಟಗಿ, ‘ಬಂಧನಕ್ಕೆ ಒಳಗಾದ ದಿನದಿಂದಲೂ ಪಾರ್ಥ ಚಟರ್ಜಿ ಸೆರೆವಾಸದಲ್ಲಿದ್ದಾರೆ. 73 ವರ್ಷದ ಅವರ ಆರೋಗ್ಯ ಸರಿ ಇಲ್ಲ’ ಎಂದು ಪೀಠಕ್ಕೆ ತಿಳಿಸಿದರು. 

‘ಪಾರ್ಥ ವಿರುದ್ಧ ಭಾರಿ ಭ್ರಷ್ಟಾಚಾರದ ಆರೋಪ ಇದ್ದು, 50 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ತೊಂದರೆಯಾಗಿದೆ’ ಎಂದ ಎಎಸ್‌ಜಿ ರಾಜು, ಪಾರ್ಥ ಅವರ ಜಾಮೀನು ಅರ್ಜಿಗೆ ವಿರೋಧ ವ್ಯಕ್ತಪಡಿಸಿದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ, ಡಿಸೆಂಬರ್ 2ಕ್ಕೆ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.