ಮುಂಬೈ: ‘ನನ್ನ ಫೌಂಡೇಷನ್‌ನಲ್ಲಿರುವ ಪ್ರತಿಯೊಂದು ರೂಪಾಯಿಯೂ ಅಮೂಲ್ಯ ಜೀವಗಳನ್ನು ಉಳಿಸಲು ಹಾಗೂ ನಿರ್ಗತಿಕರ ಕಲ್ಯಾಣಕ್ಕಾಗಿ ಬಳಕೆಯಾಗುತ್ತಿದೆ'ಎಂದು ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳೆದ ವಾರ ಆದಾಯ ತೆರಿಗೆ ಅಧಿಕಾರಿಗಳು ತಮ್ಮ ವಿರುದ್ಧ ಸರ್ಕಾರಕ್ಕೆ 20 ಕೋಟಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ ನಂತರ, ಮೊದಲ ಬಾರಿಗೆ ಮೌನ ಮುರಿದಿರುವ ನಟ ಸೋನುಸೂದ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಪೋಸ್ಟ್ ಮಾಡಿದ್ದಾರೆ.
‘ನಾನು ಕೆಲವು ಹೊಸ ಅತಿಥಿಗಳನ್ನು ಬರ ಮಾಡಿಕೊಳ್ಳುವ ಕೆಲಸದಲ್ಲಿ ನಿರತನಾಗಿದ್ದ ಕಾರಣ, ನಾಲ್ಕು ದಿನಗಳಿಂದ ಜನರ ಕರೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನಾನು ಜನರ ಸೇವೆಗೆ ಮರಳಿದ್ದೇನೆ. ನಿಮ್ಮ ವಿನಮ್ರ ಸೇವೆಗಾಗಿ ನನ್ನ ಪ್ರಯಾಣ ಮುಂದುವರಿಯುತ್ತದೆ. ಜೈ ಹಿಂದ್‘ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನನ್ನ ಎಲ್ಲ ಶಕ್ತಿಯನ್ನೂ ಹೃತ್ಪೂರ್ವಕಾಗಿ ದೇಶದ ಜನರ ಸೇವೆಗೆ ಮೀಸಲಿಡುವುದಾಗಿ ಪ್ರತಿಜ್ಞೆ ಮಾಡಿದ್ದೇನೆ‘ ಎಂದು ಸೋನು ಹೇಳಿದ್ದಾರೆ.
‘ಪ್ರತಿ ಬಾರಿ ನೀವು ನಿಮ್ಮ ಕಥೆಗಳನ್ನು ಹೇಳಬೇಕಿಲ್ಲ. ಸಮಯ ಬರುತ್ತದೆ'ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿರುವ ಸೋನು ಸೂದ್, ‘ನನ್ನ ಸೇವಾ ಫೌಂಡೇಷನ್‌ನಲ್ಲಿರುವ ಪ್ರತಿಯೊಂದು ರೂಪಾಯಿಯೂ ನಿರ್ಗತಿಕರಿಗೆ ಹಾಗೂ ಅಮೂಲ್ಯ ಜೀವ ಉಳಿಸುವುದಕ್ಕಾಗಿ ಉಪಯೋಗವಾಗಲು ಕಾಯುತ್ತಿದೆ. ನನ್ನ ಜಾಹಿರಾತು ಮತ್ತಿತರ ಬ್ರಾಂಡ್‌ಗಳಿಂದ ಬರುವ ಸಂಭಾವನೆಯನ್ನು ಅನೇಕ ಮಾನವೀಯ ಕಾರಣಗಳಿಗಾಗಿ ಉಪಯೋಗಿಸಲು ಪ್ರೋತ್ಸಾಹಿಸಿದ್ದೇನೆ. ಅದನ್ನು ಈಗಲೂ ಮುಂದುವರಿಸುತ್ತೇನೆ'ಎಂದು ಹೇಳಿದ್ದಾರೆ.
ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಸೋನು ಸೂದ್ ಅವರ ಮುಂಬೈ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಲಖನೌ ಕಂಪನಿಗಳಲ್ಲಿ ಕೇಂದ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ತಪಾಸಣೆ ನಡೆಸಿದ್ದರು. ಸೋನು ಸೂದ್ ತಮ್ಮ ಖಾತೆಯಲ್ಲಿ ‘ಲೆಕ್ಕವಿಲ್ಲದ ಆದಾಯ ಹಾಗೂ ಅನೇಕ ನಕಲಿ ಸಂಸ್ಥೆಗಳಿಂದ ಸಾಲಗಳ ರೂಪದಲ್ಲಿ ಪಡೆದಿರುವ ಹಣ'ಪತ್ತೆ ಮಾಡಿರುವುದಾಗಿ ಅಧಿಕಾರಿಗಳು ಹೇಳಿದ್ದರು.
ಸೋನು ಸೂದ್ ಅವರು ವಿದೇಶಗಳಿಂದ ದೇಣಿಗೆ ಪಡೆಯುವ ವೇಳೆ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(ಎಫ್‌ಸಿಆರ್‌ಎ)ಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.