ADVERTISEMENT

‘ಇವಿಎಂ– ಚೋರ್‌ ಮೆಷಿನ್‌’: ಫಾರೂಕ್‌ ಅಬ್ದುಲ್ಲಾ

ಏಜೆನ್ಸೀಸ್
Published 19 ಜನವರಿ 2019, 10:54 IST
Last Updated 19 ಜನವರಿ 2019, 10:54 IST
   

ಕೋಲ್ಕತ್ತ: ವಿದ್ಯುನ್ಮಾನ ಮತಯಂತ್ರ(ಇವಿಎಂ)ವನ್ನು ಚೋರ್‌ ಮೆಷಿನ್‌(ಕಳ್ಳಯಂತ್ರ) ಎಂದು ಕರೆದಿರುವ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ, ಉತ್ತಮ ರೀತಿಯ ಆಯ್ಕೆ ಪ್ರಕ್ರಿಯೆಗಾಗಿ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ನ್ನು ಮತ್ತೆ ಬಳಕೆ ತರುವಂತೆ ಆಗ್ರಹಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಬಲ ಪ್ರದರ್ಶನಕ್ಕೆ ಕೋಲ್ಕತ್ತದಲ್ಲಿ ವೇದಿಕೆ ಸೃಷ್ಟಿಸಿದ್ದಾರೆ. ದೇಶದಲ್ಲಿ ಬಿಜೆಪಿ ವಿರೋಧಿಸುವ ಬಹುತೇಕ ಎಲ್ಲ ಪಕ್ಷಗಳ ಮುಖಂಡರು ’ಯುನೈಟೆಡ್‌ ಇಂಡಿಯಾ ರ‍್ಯಾಲಿ’ಯಲ್ಲಿ ಭಾಗಿಯಾಗಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ಮಾತನಾಡಿರುವ ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಫಾರೂಕ್‌ ಅಬ್ದುಲ್ಲಾ, ’ಜಗತ್ತಿನ ಯಾವುದೇ ರಾಷ್ಟ್ರವು ಈ ಯಂತ್ರಗಳನ್ನು ಬಳಸುತ್ತಿಲ್ಲ’ ಎಂದಿದ್ದಾರೆ.

’ಇವಿಎಂ ಕಳ್ಳತನದ ಯಂತ್ರವಾಗಿದೆ. ನಾವು ಚುನಾವಣಾ ಆಯೋಗ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಇವಿಂಎಗಳ ಬಳಕೆ ನಿಲ್ಲಿಸಲು ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.

ADVERTISEMENT

ಇವಿಎಂಗಳ ದೋಷಗಳನ್ನು ಪ್ರಸ್ತಾಪಿಸಿ, ಅವುಗಳ ವಿಶ್ವಾಸಾರ್ಹತೆಯನ್ನು ಈಗಾಗಲೇ ಹಲವು ಪಕ್ಷಗಳು ಪ್ರಶ್ನಿಸಿವೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪೇಪರ್‌ ಬ್ಯಾಲೆಟ್ ಕ್ರಮವನ್ನು ಮತ್ತೆ ಪ್ರಾರಂಭಿಸುವಂತೆ ಒತ್ತಾಯಿಸಿವೆ.

ಇವಿಎಂಗಳನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿ ಹಾಕಿರುವ ಚುನಾವಣಾ ಆಯುಕ್ತ ಸುನಿಲ್‌ ಅರೋರಾ, ಚುನಾವಣೆಗಳಲ್ಲಿ ಸೋಲು ಅನುಭವಿಸುವ ಪಕ್ಷಗಳು ಇವಿಎಂನ್ನು ’ಕಾಲ್ಚೆಂಡಿನಂತೆ’ ಕಾಣುತ್ತಿವೆ ಎಂದಿದ್ದಾರೆ. ಮಾಜಿ ಚುನಾವಣಾ ಆಯುಕ್ತ ಒ.ಪಿ.ರಾವತ್‌ ಸಹಾ ಈ ಹಿಂದೆ ಇವಿಎಂಗಳ ಬಗ್ಗೆ ಪ್ರತಿಕ್ರಿಯಿಸುತ್ತ, ’ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಸೋಲು ಕಂಡಾಗ ಇವಿಎಂಗಳನ್ನು ದೂರುತ್ತವೆ. ಆದರೆ, ಗೆದ್ದಾಗ ಇವಿಎಂಗಳ ಪ್ರಸ್ತಾಪವೇ ಇರುವುದಿಲ್ಲ’ ಎಂದು ಹೇಳಿದ್ದರು.

ಪುನಃ ಪೇಪರ್‌ ಬ್ಯಾಲೆಟ್‌ ಕ್ರಮವನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸುವ ಪ್ರಶ್ನೆಯೇ ಇಲ್ಲ. ಇರುವ ಎಂಥದ್ದೇ ಅನುಮಾನವನ್ನೂ ’ವಿವಿಪ್ಯಾಟ್‌’ನಿಂದ ಶಮನಗೊಳಿಸಬಹುದು. ಲೋಕಸಭಾ ಚುನಾವಣೆಯಲ್ಲಿ ಇವುಗಳ ಬಳಕೆ ಇನ್ನಷ್ಟು ಹೆಚ್ಚಲಿದೆ. ಚುನಾವಣಾ ಆಯೋಗವು ಉತ್ತಮ ರೀತಿಯಲ್ಲಿ ಚುನಾವಣೆ ನಡೆಸಲಿದೆ ಎಂದುಸುನಿಲ್‌ ಅರೋರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಧರ್ಮದ ಆಧಾರದಲ್ಲಿ ಬಿಜೆಪಿ ಜನರ ನಡುವೆ ಕಂದರ ಸೃಷ್ಟಿಸುತ್ತಿದೆ ಎಂದು ಫಾರೂಕ್‌ ಅಬ್ದುಲ್ಲಾ ದೂರಿದ್ದಾರೆ. ’ಜನರನ್ನು ಪಾಕಿಸ್ತಾನಿಯರು ಎಂದು ಬಿಂಬಿಸಲಾಗುತ್ತಿದೆ. ಆದರೆ, ಲಡಾಕ್‌ನಿಂದ ಹಿಡಿದು ಎಲ್ಲ ಭಾಗದ ಜನರು ಭಾರತ ದೇಶದ ಭಾಗವಾಗಿ ಬದುಕಲು ಹಂಬಲಿಸುತ್ತಿದ್ದಾರೆ. ನಾನೊಬ್ಬ ಮುಸ್ಲಿಂ ಹಾಗೂ ನಾನು ನನ್ನ ರಾಷ್ಟ್ರ ಭಾರತವನ್ನು ಪ್ರೀತಿಸುತ್ತೇನೆ’ ಎಂದು ದೇಶಾಭಿಮಾನಿ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ತ್ರಿವಳಿ ತಲಾಕ್‌ ಮಸೂದೆಯ ಪರವಾಗಿ ಸಂಸತ್ತಿನಲ್ಲಿ ನಿಲ್ಲುತ್ತದೆ. ಆದರೆ, ದೇಶದಲ್ಲಿ ಮಹಿಳೆಯರಾಗಿ ಯಾವುದೇ ಕಾರ್ಯ ಮಾಡಿಲ್ಲ. ಎಲ್ಲ ವಿರೋಧ ಪಕ್ಷಗಳೂ ಒಗ್ಗಟ್ಟಾಗಿಮುಂಬರುವ ಚುನಾವಣೆಯನ್ನು ಎದುರಿಸಬೇಕು, ಚುನಾವಣೆಯ ಫಲಿತಾಂಶ ಹೊರಬಂದ ನಂತರದಲ್ಲಿ ಪ್ರಧಾನಿಯ ಆಯ್ಕೆ ನಿರ್ಧಾರ ಮಾಡಬಹುದು ಎಂದು ವಿರೋಧ ಪಕ್ಷಗಳಿಗೆ ಕಿವಿ ಮಾತು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.