ADVERTISEMENT

ನೇಣಿಗೆ ಹಾಕಲು ಸಿದ್ಧ: ಪವನ್ ಜಲ್ಲಾದ್

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಸಾಧ್ಯತೆ; ನೇಣಿಗೇರಿಸುವ ವೃತ್ತಿಯ ಮೂರನೇ ತಲೆಮಾರಿನ ವ್ಯಕ್ತಿ ಸಜ್ಜು

ಪಿಟಿಐ
Published 13 ಡಿಸೆಂಬರ್ 2019, 20:15 IST
Last Updated 13 ಡಿಸೆಂಬರ್ 2019, 20:15 IST
HANG ROPE
HANG ROPE   

ಲಖನೌ:2012ರ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳನ್ನು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲು ಸಿದ್ಧ ಎಂದು ನೇಣಿಗೆ ಹಾಕುವ ಪವನ್ ಜಲ್ಲಾದ್ (55) ಎಂಬುವರು ಶುಕ್ರವಾರ ಹೇಳಿದ್ದಾರೆ.

ನೇಣಿಗೆ ಹಾಕುವ ಕುಟುಂಬದ ಮೂರನೇ ತಲೆಮಾರಿಗೆ ಪವನ್ ಸೇರಿದ್ದಾರೆ. ಇಂದಿರಾಗಾಂಧಿ ಅವರನ್ನು ಕೊಂದಿದ್ದ ಇಬ್ಬರು ಹಂತಕರನ್ನು ಇವರ ತಾತ ನೇಣಿಗೆ ಹಾಕಿದ್ದರು. ಕ್ರಿಮಿನಲ್‌ಗಳಾದ ರಂಗಾ, ಬಿರ್ಲಾ ಅವರಿಗೂ ನೇಣಿನ ಕುಣಿಕೆ ತೊಡಿಸಿದ್ದರು. ಇವರ ತಂದೆ ಕೂಡಾ ಇದೇ ಕರ್ತವ್ಯ ನಿರ್ವಹಿಸುತ್ತಿದ್ದರು.

ನೇಣಿಗೆ ಹಾಕುವವರನ್ನು ಕಳುಹಿಸುವಂತೆ ತಿಹಾರ್ ಜೈಲಿನಿಂದ ಬೇಡಿಕೆ ಬಂದಿದೆ ಎಂದು ಉತ್ತರ ಪ್ರದೇಶ ಕಾರಾಗೃಹ ಇಲಾಖೆ ಗುರುವಾರ ಖಚಿತಪಡಿಸಿತ್ತು. ‘ಲಖನೌದಲ್ಲಿರುವ ನೇಣಿಗೇರಿಸುವ ಸಿಬ್ಬಂದಿಗೆ ಅನಾರೋಗ್ಯವಿದ್ದು, ಮೀರಠ್ ಜೈಲಿನಲ್ಲಿರುವ ಪವನ್ ಜಲ್ಲಾದ್‌ಗೆ ಸಿದ್ಧವಾಗಿ ಇರುವಂತೆ ಸೂಚಿಸಲಾಗಿದೆ’ ಎಂದು ಕಾರಾಗೃಹ ಇಲಾಖೆ ಮಹಾನಿರ್ದೇಶಕರು ತಿಳಿಸಿದ್ದರು.

ADVERTISEMENT

ಪವನ್ ಜಲ್ಲಾದ್ ಅವರಿಗೆ ಮೀರಠ್ ಜೈಲು ಆಡಳಿತದಿಂದ ಈವರೆಗೆ ಯಾವುದೇ ಸೂಚನೆ ಬಂದಿಲ್ಲ. ಒಂದು ವೇಳೆ ಕರೆ ಬಂದರೆ 24 ಗಂಟೆಯೊಳಗೆ ತಿಹಾರ್‌ ಜೈಲು ತಲುಪುವುದಾಗಿ ಅವರು ಹೇಳಿದ್ದಾರೆ.

‘ನನ್ನ ತಂದೆ ಬಬ್ಬು ಜಲ್ಲಾದ್, ತಾತ ಕುಲ್ಲು ಜಲ್ಲಾದ್ ಇದೇ ಕೆಲಸ ಮಾಡುತ್ತಿದ್ದರು. ಐದು ಮಂದಿಯನ್ನು ಗಲ್ಲಿಗೇರಿಸುವ ಪ್ರಕ್ರಿಯೆಯಲ್ಲಿ ನಾನು ನನ್ನ ತಾತನಿಗೆ ಸಹಾಯ ಮಾಡಿದ್ದೆ’ ಎಂದು ಪವನ್ ಹೇಳಿದ್ದಾರೆ. ಇದಕ್ಕಾಗಿ ತಾತನ ಜತೆ ಪಟಿಯಾಲ, ಅಲಹಾಬಾದ್, ಆಗ್ರಾ, ಜೈಪುರಕ್ಕೆ ಭೇಟಿ ನೀಡಿದ್ದಾಗಿ ಹೇಳಿದ್ದಾರೆ.

ಮುಕೇಶ್‌ ಸಿಂಗ್‌, ವಿನಯ್‌ ಶರ್ಮಾ, ಪವನ್ ಕುಮಾರ್ ಹಾಗೂ ಅಕ್ಷಯ್‌ ಎಂಬ ಅಪರಾಧಿಗಳು ನಿರ್ಭಯಾ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.