ADVERTISEMENT

ಪಾರದರ್ಶಕ ಕೊಲಿಜಿಯಂ ವ್ಯವಸ್ಥೆ ಹಳಿತಪ್ಪಿಸದಿರಿ: ‘ಸುಪ್ರೀಂ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 17:33 IST
Last Updated 2 ಡಿಸೆಂಬರ್ 2022, 17:33 IST
   

ನವದೆಹಲಿ: ಈಗಾಗಲೇ ಇರುವ ಕೊಲಿಜಿಯಂ ವ್ಯವಸ್ಥೆಯು ಉನ್ನತ ನ್ಯಾಯಾಲಯದ ಅತ್ಯಂತ ಪಾರದರ್ಶಕ ಸಂಸ್ಥೆಗಳಲ್ಲಿ ಒಂದೆನಿಸಿದೆ. ಕೆಲವು ವ್ಯಕ್ತಿಗಳ ಹೇಳಿಕೆಗಳ ಆಧಾರದ ಮೇಲೆ ಈ ವ್ಯವಸ್ಥೆಯ ಹಳಿ ತಪ್ಪಿಸಬಾರದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಖಡಕ್ಕಾಗಿ ಹೇಳಿದೆ.

ಸಾಂವಿಧಾನಿಕ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ವ್ಯವಸ್ಥೆಯ ಬಗ್ಗೆ ಸರ್ಕಾರದ ಜತೆಗೆ ಉಂಟಾಗಿರುವ ವಿವಾದ, ಕೊಲಿಜಿಯಂನಲ್ಲಿ ಹಿಂದೊಮ್ಮೆ ಸದಸ್ಯರಾಗಿದ್ದ ಉನ್ನತ ನ್ಯಾಯಾಲಯದ ಮಾಜಿ ನ್ಯಾಯಾಧೀಶರು ಕೊಲಿಜಿಯಂ ವ್ಯವಸ್ಥೆಯ ಕಾರ್ಯನಿರ್ವಹಣೆ ಕುರಿತು ನೀಡಿರುವ ಹೇಳಿಕೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಅದು ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌. ಶಾ ಮತ್ತು ಸಿ.ಟಿ. ರವಿಕುಮಾರ್ ಅವರಿದ್ದ ಪೀಠವು, ‘ಹಿಂದೆ ಕೊಲಿಜಿಯಂನ ಭಾಗವಾಗಿದ್ದವರು (ಮಾಜಿ ನ್ಯಾಯಮೂರ್ತಿಗಳು) ಅವರದೇ ಕಾಲದಲ್ಲಿ ಕೊಲಿಜಿಯಂ ತೆಗೆದುಕೊಂಡ ನಿರ್ಧಾರಗಳನ್ನು ಟೀಕಿಸುವುದುಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಷನ್ ಆಗಿ ಮಾರ್ಪಟ್ಟಿದೆ. ಅವರ ಟೀಕೆಗಳ ಬಗ್ಗೆ ನಾವು ಏನನ್ನೂ ಹೇಳಲು ಬಯಸುವುದಿಲ್ಲ’ ಎಂದಿತು.

ADVERTISEMENT

‘ಕೊಲಿಜಿಯಂ ಕೆಲವರ ಹೇಳಿಕೆಗಳ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಅದು ತನ್ನ ಕರ್ತವ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲಿದೆ. ಇದು ಅತ್ಯಂತ ಪಾರದರ್ಶಕ ಸಂಸ್ಥೆಗಳಲ್ಲಿ ಒಂದು’ ಎಂದು ಪೀಠ ಹೇಳಿದೆ.

ಆರ್‌ಟಿಐ ಕಾರ್ಯಕರ್ತೆ ಅಂಜಲಿ ಭಾರದ್ವಾಜ್‌ ಅವರ ಅರ್ಜಿಯ ವಿಚಾರಣೆ ನಡೆಸುವಾಗ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.