ADVERTISEMENT

ತಜ್ಞರ ಪ್ರಕಾರ ದೆಹಲಿಯಲ್ಲಿ ಕೋವಿಡ್ ಎರಡನೇ ಅಲೆ ಗರಿಷ್ಠ ಮಟ್ಟದಲ್ಲಿ: ಕೇಜ್ರಿವಾಲ್

ಏಜೆನ್ಸೀಸ್
Published 24 ಸೆಪ್ಟೆಂಬರ್ 2020, 13:27 IST
Last Updated 24 ಸೆಪ್ಟೆಂಬರ್ 2020, 13:27 IST
ದೆಹಲಿಯಲ್ಲಿ ವಲಸೆ ಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸುತ್ತಿರುವುದು–ಸಂಗ್ರಹ ಚಿತ್ರ
ದೆಹಲಿಯಲ್ಲಿ ವಲಸೆ ಕಾರ್ಮಿಕರಿಗೆ ಕೋವಿಡ್‌ ಪರೀಕ್ಷೆ ನಡೆಸುತ್ತಿರುವುದು–ಸಂಗ್ರಹ ಚಿತ್ರ   

ನವದೆಹಲಿ: ಕೋವಿಡ್‌–19 ಎರಡನೇ ಅಲೆಯು ದೆಹಲಿಯಲ್ಲಿ ಗರಿಷ್ಠ ಮಟ್ಟ ತಲುಪಿದೆ ಎಂದು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗುರುವಾರ ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿರುವುದಾಗಿಯೂ ಹೇಳಿದ್ದಾರೆ.

'ಜುಲೈ 1ರಿಂದ ಆಗಸ್ಟ್‌ 17ರ ವರೆಗೂ ಕೋವಿಡ್‌ ಪ್ರಕರಣಗಳು ನಿಯಂತ್ರಣದಲ್ಲಿದ್ದವು. ಸೆಪ್ಟೆಂಬರ್‌ 17ರಂದು ಕೋವಿಡ್‌ ದೃಢಪಟ್ಟ 4,500 ಹೊಸ ಪ್ರಕರಣಗಳು ದಾಖಲಾಗಿದ್ದು, ಈಗ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ತಜ್ಞರ ಪ್ರಕಾರ, ಕೊರೊನಾ ವೈರಸ್‌ ಎರಡನೇ ಅಲೆಯು ದೆಹಲಿಯಲ್ಲಿ ಗರಿಷ್ಠ ಮಟ್ಟದಲ್ಲಿದೆ ಹಾಗೂ ಮುಂದಿನ ದಿನಗಳಲ್ಲಿ ಪ್ರಮಾಣ ಇಳಿಕೆಯಾಗಿದೆ' ಎಂದು ಕೇಜ್ರಿವಾಲ್‌ ಹೇಳಿರುವುದಾಗಿ ವರದಿಯಾಗಿದೆ.

ನಿತ್ಯ ನಡೆಸಲಾಗುತ್ತಿರುವ ಕೋವಿಡ್‌–19 ಪರೀಕ್ಷೆಗಳ ಸಂಖ್ಯೆ 20,000ದಿಂದ 60,000ಕ್ಕೆ ಏರಿಕೆ ಮಾಡಲಾಗಿದೆ.

ADVERTISEMENT

ಬುಧವಾರದವರೆಗೂ ದೆಹಲಿಯಲ್ಲಿ ಒಟ್ಟು ಕೋವಿಡ್‌ ಪ್ರಕರಣಗಳ ಸಂಖ್ಯೆ 2,56,789 ದಾಖಲಾಗಿದ್ದು, ಆ ಪೈಕಿ 2,20,866 ಮಂದಿ ಗುಣಮುಖರಾಗಿದ್ದಾರೆ ಹಾಗೂ 5,087 ಮಂದಿ ಸಾವಿಗೀಡಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಕೋವಿಡ್‌ ದೃಢ ಪಟ್ಟ ಪ್ರಕರಣಗಳ ಸಂಖ್ಯೆ 4,000ಕ್ಕಿಂತ ಕಡಿಮೆ ವರದಿಯಾಗಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಿದಂತೆಲ್ಲ ಕೇಂದ್ರ ಸರ್ಕಾರ, ಎನ್‌ಜಿಒ ಹಾಗೂ ದೆಹಲಿ ಜನರ ಸಹಕಾರದೊಂದಿಗೆ ನಾವು ಅದನ್ನು ನಿಯಂತ್ರಿಸುವಲ್ಲಿ ಸಫಲರಾಗಿದ್ದೇವೆ ಎಂದು ಕೇಜ್ರಿವಾಲ್‌ ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.