ಸ್ಫೋಟ
(ಐಸ್ಟೋಕ್ ಚಿತ್ರ)
ಅಮೃತಸರ: ಪಂಜಾಬ್‌ನ ಅಮೃತಸರದಲ್ಲಿರುವ ಠಾಕುರ್ ದ್ವಾರ ದೇವಾಲಯದ ಬಳಿ ಶುಕ್ರವಾರ ಮಧ್ಯರಾತ್ರಿ ಸ್ಫೋಟ ಸಂಭವಿಸಿದ್ದು, ಇದರಿಂದಾಗಿ ದೇವಾಲಯದ ಗೋಡೆಗಳಿಗೆ ಹಾನಿಯಾಗಿ, ಕಿಟಕಿ ಗಾಜುಗಳು ಒಡೆದಿವೆ.
ಘಟನೆಯಲ್ಲಿ ಯಾರೊಬ್ಬರೂ ಗಾಯಗೊಂಡಿಲ್ಲ. ಆದರೆ, ಸ್ಫೋಟದಿಂದಾಗಿ ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು. ಸ್ಥಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಮೃತಸರ ಪೊಲೀಸ್ ವರಿಷ್ಠಾಧಿಕಾರಿ ಗುರ್‌ಪ್ರೀತ್ ಸಿಂಗ್ ತಿಳಿಸಿದರು.
ಈ ದಾಳಿಯ ಹಿಂದೆ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್‌ಐ ಕೈವಾಡವಿರುವ ಬಗ್ಗೆ ಶಂಕಿಸಲಾಗಿದೆ. ಶೀಘ್ರವೇ ಅಪರಾಧಿಗಳನ್ನು ಪತ್ತೆಹಚ್ಚಲಾಗುವುದು. ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರವಾಹನದಲ್ಲಿ ದೇವಾಲಯದ ಬಳಿ ಬಂದರು. ಅದರಲ್ಲಿ ಒಬ್ಬ ವಾಹನದಿಂದ ಕೆಳಗಿಳಿದು ದೇವಾಲಯದ ಬಳಿ ಸ್ಫೋಟಕ ಎಸೆದಿದ್ದಾನೆ. ನಂತರ ಇಬ್ಬರೂ ಸ್ಥಳದಿಂದ ಪರಾರಿಯಾಗಿರುವುದು ಸಿ.ಸಿ.ಟಿ.ವಿ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಮಾಹಿತಿ ನೀಡಿದರು.
ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿ ಕಳೆದ ನಾಲ್ಕು ತಿಂಗಳಿನಿಂದ ಅಮೃತಸರ ಹಾಗೂ ಗುರುದಾಸಪುರದಲ್ಲಿ ಅನೇಕ ದಾಳಿಗಳನ್ನು ನಡೆಸಲಾಗಿದೆ. ಆದರೆ ದೇವಸ್ಥಾನದ ಮೇಲೆ ದಾಳಿ ನಡೆದಿರುವುದು ಇದೆ ಮೊದಲು.
ದೇವಸ್ಥಾನವನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. ಎಎಪಿ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ ಎಂದು ವಿಪಕ್ಷಗಳು ಕಿಡಿಕಾರಿವೆ.
ಶಾಂತಿ ಕದಡಲು ಬಯಸುವವರಿಂದ ಈ ಘಟನೆ ನಡೆದಿದೆ. ಅವರು ಉದ್ದೇಶ ಎಂದಿಗೂ ಈಡೇರುವುದಿಲ್ಲ. ಭಗವಂತ ಮಾನ್, ಪಂಜಾಬ್ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.