ADVERTISEMENT

ಅಂಬಾನಿ ನಿವಾಸದ ಬಳಿ ಸ್ಫೋಟಕ ವಾಹನ: ತಿಹಾರ್‌ನಲ್ಲಿ ರೂಪುಗೊಂಡ ಟೆಲಿಗ್ರಾಮ್ ಚಾನೆಲ್

ಪಿಟಿಐ
Published 11 ಮಾರ್ಚ್ 2021, 19:31 IST
Last Updated 11 ಮಾರ್ಚ್ 2021, 19:31 IST
ಅಂಬಾನಿ ನಿವಾಸದ ಎದುರು ನಿಯೋಜಿಸಲಾಗಿರುವ ಭದ್ರತೆ (ಪಿಟಿಐ ಚಿತ್ರ)
ಅಂಬಾನಿ ನಿವಾಸದ ಎದುರು ನಿಯೋಜಿಸಲಾಗಿರುವ ಭದ್ರತೆ (ಪಿಟಿಐ ಚಿತ್ರ)   

ಮುಂಬೈ: ಖ್ಯಾತ ಉದ್ಯಮಿ ಮುಕೇಶ್‌ ಅಂಬಾನಿ ಅವರ ಮನೆ ಬಳಿ ಸ್ಫೋಟಕಗಳಿದ್ದ ವಾಹನ ನಿಲ್ಲಿಸಿದ್ದ ಹೊಣೆಯನ್ನು ಹೊತ್ತುಕೊಂಡಿರುವ ‘ಜೈಷ್‌ ಉಲ್‌ ಹಿಂದ್‌’ ಸಂಘಟನೆಯು ಟೆಲಿಗ್ರಾಂ ಚಾನೆಲ್‌ ಅನ್ನು ದೆಹಲಿಯ ತಿಹಾರ್‌ ಜೈಲಿನ ಬಳಿ ರೂಪಿಸಿದೆ ಎಂದು ಮುಂಬೈಯ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಟೆಲಿಗ್ರಾಂ ಚಾನೆಲ್‌ ರೂಪಿಸಲು ಬಳಸಿದ ಪೋನ್‌ನ ಸ್ಥಳವನ್ನು ಪತ್ತೆ ಹಚ್ಚಲು ಖಾಸಗಿ ಸೈಬರ್‌ ಎಜೆನ್ಸಿಯ ಸಹಾಯ ಪಡೆಯಲಾಗಿತ್ತು. ದೆಹಲಿಯ ತಿಹಾರ್‌ ಜೈಲಿನ ಬಳಿ ಫೋನ್‌ ಇರುವುದನ್ನು ತನಿಖೆ ವೇಳೆ ಪತ್ತೆ ಮಾಡಲಾಗಿದೆ. ಈ ಕುರಿತು ಮಾಹಿತಿಯನ್ನು ದೆಹಲಿ ಪೊಲೀಸರಿಗೂ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಫೆಬ್ರುವರಿ 25 ರಂದು ದಕ್ಷಿಣ ಮುಂಬೈ ಪ್ರದೇಶದಲ್ಲಿರುವ ಅಂಬಾನಿಯ ಬಹುಮಹಡಿ ನಿವಾಸದ ಬಳಿ ಜೆಲೆಟಿನ್‌ ಕಡ್ಡಿಗಳಿದ್ದ ವಾಹನ ಪತ್ತೆಯಾಗಿತ್ತು. 26 ರಂದು ಟೆಲಿಗ್ರಾಂ ಚಾನೆಲ್‌ ರೂಪಿಸಲಾಗಿದೆ. ಸ್ಫೋಟಕಗಳಿದ್ದ ವಾಹನ ನಿಲ್ಲಿಸಿದ್ದ ಹೊಣೆಯನ್ನು ಹೊತ್ತಿದ್ದ ಸಂದೇಶವನ್ನು ಟೆಲಿಗ್ರಾಂ ಅಪ್ಲಿಕೇಶನ್‌ ಮೂಲಕ 27 ರಂದು ಪೋಸ್ಟ್‌ ಮಾಡಲಾಗಿದೆ. ಕ್ರಿಪ್ಟೊ ಕರೆನ್ಸಿ ಮೂಲಕ ಹಣ ಪಾವತಿಸುವಂತೆ ಸೂಚಿಸಿ ವೆಬ್‌ಪೇಜ್‌ನ ಲಿಂಕ್‌ ನೀಡಲಾಗಿತ್ತು. ಲಿಂಕ್‌ ಲಭ್ಯವಿಲ್ಲ ಎಂಬುವುದು ತನಿಖೆ ಸಂದರ್ಭದಲ್ಲಿ ಗೊತ್ತಾಗಿತ್ತು. ತನಿಖಾಧಿಕಾರಿಗಳು ಇದೊಂದು ಕುಚೇಷ್ಟೆ ಎಂದು ಶಂಕಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಫೆಬ್ರುವರಿ 28 ರಂದು ಜೈಷ್‌ ಉಲ್‌ ಹಿಂದ್‌ ಸಂಘಟನೆಯಿಂದ ಮತ್ತೊಂದು ಸಂದೇಶವು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಹರಿದಾಡಿದೆ. ಈ ಪ್ರಕರಣದಲ್ಲಿ ಸಂಘಟನೆಯ ಯಾವುದೇ ಪಾತ್ರವಿಲ್ಲ ಎಂದು ಹೇಳಲಾಗಿದೆ.

ಈ ಪ್ರಕರಣದ ತನಿಖೆಯನ್ನು ಆರಂಭದಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗ ನಡೆಸಿತ್ತು. ನಂತರ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳಕ್ಕೆ (ಎಟಿಎಸ್‌) ವರ್ಗಾಯಿಸಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.