ADVERTISEMENT

ನಾಮಪತ್ರ: ಕೊನೆಯ ದಿನಾಂಕ ಮುಂದೂಡಲು ಶರತ್‌ಕುಮಾರ್‌ ಮನವಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 19:31 IST
Last Updated 16 ಮಾರ್ಚ್ 2021, 19:31 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಚೆನ್ನೈ: ಆಲ್‌ ಇಂಡಿಯಾ ಸಮತ್ವ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ) ಮುಖ್ಯಸ್ಥ, ನಟ ಶರತ್‌ಕುಮಾರ್‌ ಅವರು ಚುನಾವಣಾ ಆಯೋಗದ ಮುಂದೆ ವಿಚಿತ್ರವಾದ ಬೇಡಿಕೆಯೊಂದನ್ನು ಇರಿಸಿದ್ದಾರೆ. ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಬೇಕು ಎಂದು ಅವರು ಕೋರಿದ್ದಾರೆ.

ಕಮಲಹಾಸನ್‌ ಅವರ ಎಂಎನ್‌ಎಂ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಐಎಸ್‌ಎಂಕೆ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.

ಮುಷ್ಕರದಿಂದಾಗಿ ಅಭ್ಯರ್ಥಿಗಳು ಹೊಸ ಬ್ಯಾಂಕ್‌ ಖಾತೆ ತೆರೆಯಲು ಸಾಧ್ಯವಾಗುತ್ತಿಲ್ಲ. ನಾಮಪತ್ರ ಸಲ್ಲಿಕೆಗೆ ಆಯೋಗವು ಆರು ದಿನ ನೀಡಿದೆ. ಪ್ರಕ್ರಿಯೆ ಪೂರ್ಣಗೊಳಿಸಲು ನಾಲ್ಕು ದಿನ ಮಾತ್ರ ಬಾಕಿ ಇವೆ. ಬ್ಯಾಂಕ್‌ ನೌಕರರ ಬೇಡಿಕೆ ನ್ಯಾಯಯುತವಾದುದು ಎಂದು ಶರತ್‌ಕುಮಾರ್‌ ಹೇಳಿದ್ದಾರೆ.

ADVERTISEMENT

2016ರ ಚುನಾವಣೆಯಲ್ಲಿ ಎಐಎಡಿಎಂಕೆ ಜತೆಗಿದ್ದ ಶರತ್‌ಕುಮಾರ್‌ ಅವರ ಪಕ್ಷವು ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿತ್ತು. ಈ ಬಾರಿ, ಈ ಪಕ್ಷಕ್ಕೆ 40 ಕ್ಷೇತ್ರಗಳನ್ನು ಕಮಲಹಾಸನ್ ನೀಡಿದ್ದರು. ಅದರಲ್ಲಿ ಮೂರು ಕ್ಷೇತ್ರಗಳನ್ನು ಶರತ್‌ಕುಮಾರ್‌ ಹಿಂದಿರುಗಿಸಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಲೇವಡಿಗೆ ಕಾರಣವಾಗಿತ್ತು.

ಚಾಂಡಿ, ಚೆನ್ನಿತ್ತಲ ನಾಮಪತ್ರ

ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್‌ ಚಾಂಡಿ ಅವರು ಕೋಟಯಂ ಜಿಲ್ಲೆಯ ಪುದುಪಳ್ಳಿಯಿಂದ ಮತ್ತು ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಅವರು ಹರಿಪಾಡ್‌ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.77 ವರ್ಷದ ಚಾಂಡಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ವಿಧಾನಸಭಾ ಸದಸ್ಯರಾಗಿ 50 ವರ್ಷ ಪೂರೈಸಿದ್ದರು. ಒಂದು ಕಾಲದಲ್ಲಿ ಎಡರಂಗದ ಕೋಟೆಯಾಗಿದ್ದ ಪುದುಪಳ್ಳಿಯಿಂದ ಸತತ 11 ಬಾರಿ ಅವರು ಗೆದ್ದಿದ್ದಾರೆ.

ಅವರನ್ನು ತಿರುವನಂತಪುರದ ನೇಮಮ್‌ ಕ್ಷೇತ್ರದಿಂದ ಕಣಕ್ಕೆ ಇಳಿಸಲಾಗುವುದು ಎಂದು ಸುದ್ದಿ ಹರಡಿದ ಕಾರಣಕ್ಕೆ ಪುದುಪಳ್ಳಿಯಲ್ಲಿ ಕಳೆದ ವಾರ ಪ್ರತಿಭಟನೆ ಕೂಡ ನಡೆದಿತ್ತು.

ವಿಜಯನ್‌ ವಿರುದ್ಧ ಸಂತ್ರಸ್ತ ಮಹಿಳೆ ಕಣಕ್ಕೆ

ತ್ರಿಶ್ಶೂರು (ಪಿಟಿಐ): 2017ರಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿ ತಮ್ಮ ಮನೆಯಲ್ಲಿಯೇ ಶವವಾಗಿ ಪತ್ತೆಯಾಗಿದ್ದ ಇಬ್ಬರು ಬಾಲಕಿಯರ ತಾಯಿಯು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಅಧಿಕಾರಿಗಳಿಗೆ ಸಂಬಂಧಿಸಿ ಸರ್ಕಾರವು ನಿಷ್ಕ್ರಿಯವಾಗಿದೆ ಎಂದು ಅರೋಪಿಸಿರುವ ಮಹಿಳೆಯು, ಪ್ರತಿರೋಧದ ಭಾಗವಾಗಿ ವಿಜಯನ್‌ ವಿರುದ್ಧ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

‘ನಾನು ತಿರುವನಂತಪುರದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆ. ನನ್ನ ಮಕ್ಕಳ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೋಗರೆದಿದ್ದೆ. ಈಗ ವಿಜಯನ್‌ ವಿರುದ್ಧ ಸ್ಪರ್ಧಿಸುತ್ತೇನೆ. ಸಂಘಪರಿವಾರದವನ್ನು ಬಿಟ್ಟು ಬೇರೆಲ್ಲರ ಬೆಂಬಲ ಕೋರುತ್ತೇನೆ’ ಎಂದು ಮಹಿಳೆ ಹೇಳಿದ್ದಾರೆ. ವಿಜಯನ್‌ ಅವರು ಕಣ್ಣೂರಿನ ಧರ್ಮಡಂ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ.

ಪ್ರಕರಣದ ತನಿಖೆ ನಡೆಸಿದ ಇಬ್ಬರು ಪೊಲೀಸ್‌ ಅಧಿಕಾರಿಗಳ ವಿರುದ್ಧ ಸರ್ಕಾರವು ನಿಷ್ಕ್ರಿಯವಾಗಿರುವುದನ್ನು ಖಂಡಿಸಿ ಮಹಿಳೆಯು ತಲೆ ಬೋಳಿಸಿ, ಕಾಸರಗೋಡಿನಿಂದ ತಿರುವನಂತಪುರದವರೆಗೆ ‘ನ್ಯಾಯಯಾತ್ರೆ’ಯನ್ನು ನಡೆಸುತ್ತಿದ್ದಾರೆ. ಏಪ್ರಿಲ್‌ 4ರಂದು ಯಾತ್ರೆ ಕೊನೆಗೊಳ್ಳಲಿದೆ.

ಸಾಕ್ಷ್ಯಗಳ ಕೊರತೆಯಿದೆ ಎಂದು ಹೇಳಿದ್ದ ಪೋಕ್ಸೊ ನ್ಯಾಯಾಲಯವು ಐವರು ಆರೋಪಿಗಳನ್ನು 2019ರಲ್ಲಿ ಖುಲಾಸೆಗೊಳಿಸಿತ್ತು. ಪ್ರಕರಣದ ಮರುತನಿಖೆಗೆ ಕೇರಳ ಹೈಕೊರ್ಟ್‌ ಜನವರಿಯಲ್ಲಿ ಸೂಚಿಸಿತ್ತು. ತನಿಖೆಯಲ್ಲಿ ಗಂಭೀರ ಲೋಪಗಳಾಗಿವೆ ಎಂದು ಹೇಳಿತ್ತು. ಬಳಿಕ, ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸರ್ಕಾರವು ನಿರ್ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.