ADVERTISEMENT

ವಿಸ್ತರಿತ ವಲಯ ಸಾಮರ್ಥ್ಯದ ಪಿನಾಕ ರಾಕೆಟ್‌ ವ್ಯವಸ್ಥೆ ಪರೀಕ್ಷೆ ಯಶಸ್ವಿ

ಪಿಟಿಐ
Published 11 ಡಿಸೆಂಬರ್ 2021, 11:20 IST
Last Updated 11 ಡಿಸೆಂಬರ್ 2021, 11:20 IST
ರಾಜಸ್ಥಾನದ ಪೋಖರಣ್ ವಲಯದಲ್ಲಿ ಪಿನಾಕ–ಎಆರ್‌ ರಾಕೆಟ್‌ ವ್ಯವಸ್ಥೆಯ ಪರೀಕ್ಷೆಯನ್ನು ನೆರವೇರಿಸಲಾಯಿತು –ಪಿಟಿಐ ಚಿತ್ರ
ರಾಜಸ್ಥಾನದ ಪೋಖರಣ್ ವಲಯದಲ್ಲಿ ಪಿನಾಕ–ಎಆರ್‌ ರಾಕೆಟ್‌ ವ್ಯವಸ್ಥೆಯ ಪರೀಕ್ಷೆಯನ್ನು ನೆರವೇರಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ‘ವಿಸ್ತರಿತ ವಲಯ ಸಾಮರ್ಥ್ಯ’ದ ಪಿನಾಕ ರಾಕೆಟ್‌ ವ್ಯವಸ್ಥೆಯ (ಪಿನಾಕ–ಇಆರ್‌) ಪರೀಕ್ಷಾರ್ಥ ಸರಣಿ ಪ್ರಯೋಗಗಳನ್ನು ಕಳೆದ ಮೂರು ದಿನಗಳ ಕಾಲ ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ತಿಳಿಸಿದೆ.

ಪೋಖರಣ್ ಪರೀಕ್ಷಾ ವಲಯದಲ್ಲಿ ಈ ರಾಕೆಟ್‌ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಲಾಗಿದೆ.

ಖಾಸಗಿ ಉದ್ದಿಮೆಯೊಂದು ಈ ರಾಕೆಟ್‌ ವ್ಯವಸ್ಥೆಯನ್ನು ತಯಾರಿಸಿದೆ. ರಾಕೆಟ್‌ ವ್ಯವಸ್ಥೆಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಖಾಸಗಿ ಉದ್ದಿಮೆವೊಂದಕ್ಕೆ ಡಿಆರ್‌ಡಿಒ ವರ್ಗಾಯಿಸಿತ್ತು.

ADVERTISEMENT

‘ಸೇನೆಯ ಸಹಯೋಗದಲ್ಲಿ ಡಿಆರ್‌ಡಿಒ ತಜ್ಞರು ಮೂರು ದಿನಗಳ ಅವಧಿಯಲ್ಲಿ ನಡೆಸಿದ ಪರೀಕ್ಷಾರ್ಥ ಪ್ರಯೋಗಗಳ ಮೂಲಕ ಈ ರಾಕೆಟ್‌ ವ್ಯವಸ್ಥೆಯ ಕಾರ್ಯಕ್ಷಮತೆಯ ಮೌಲ್ಯಮಾಪನ ನಡೆಸಿದರು’ ಎಂದೂ ಸಚಿವಾಲಯ ತಿಳಿಸಿದೆ.

‘ವಿವಿಧ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದ ಸಿಡಿತಲೆಗಳನ್ನು ರಾಕೆಟ್‌ಗಳಿಗೆ ಅಳವಡಿಸಲಾಗಿತ್ತು. ಎಲ್ಲ ಪರೀಕ್ಷೆಗಳ ಸಂದರ್ಭಗಳಲ್ಲಿ, ಸಿಡಿತಲೆಗಳನ್ನು ಹೊತ್ತ 24 ರಾಕೆಟ್‌ಗಳು ನಿರ್ದಿಷ್ಟ ಗುರಿ ತಲುಪಿದವು’ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಪಿನಾಕ ಎಂಕೆ–1’ ರಾಕೆಟ್‌ ವ್ಯವಸ್ಥೆ 40 ಕಿ.ಮೀ. ದೂರ ಚಿಮ್ಮುವ ಸಾಮರ್ಥ್ಯ ಹೊಂದಿದ್ದರೆ, ‘ಪಿನಾಕ–2’ರ ಸಾಮರ್ಥ್ಯ 60 ಕಿ.ಮೀ. ಇದೆ. ಆದರೆ, ಪಿನಾಕ–ಇಆರ್‌ ರಾಕೆಟ್‌ ವ್ಯವಸ್ಥೆ ಎಷ್ಟು ದೂರದ ವರೆಗೆ ಸಾಗಬಲ್ಲದು ಎಂಬ ಕುರಿತು ತಕ್ಷಣಕ್ಕೆ ವಿವರಗಳನ್ನು ಸಚಿವಾಲಯ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.