ADVERTISEMENT

ಅಂತರಿಕ್ಷಯಾನ ಅದ್ಭುತ ಪಯಣ: ಶುಭಾಂಶು ಶುಕ್ಲಾ

ಪಿಟಿಐ
Published 8 ಜೂನ್ 2025, 15:32 IST
Last Updated 8 ಜೂನ್ 2025, 15:32 IST
ಶುಭಾಂಶು ಶುಕ್ಲಾ
ಶುಭಾಂಶು ಶುಕ್ಲಾ   

ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ (ಐಎಸ್‌ಎಸ್‌) ಅಂತರಿಕ್ಷಯಾನ ಕೈಗೊಳ್ಳಲಿರುವ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ‘ಇದೊಂದು ಅದ್ಭುತ ಪಯಣ’ ಎಂದು ಬಣ್ಣಿಸಿದ್ದಾರೆ. ‘ಈ ಬಾಹ್ಯಾಕಾಶ ಕಾರ್ಯಾಚರಣೆಯ ಭಾಗವಾಗಿರುವ ನಾನು ಅದೃಷ್ಟಶಾಲಿ’ ಎಂದಿದ್ದಾರೆ.

ಭಾರತೀಯ ವಾಯುಪಡೆಯ ಪೈಲಟ್‌, 39 ವರ್ಷದ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶಕ್ಕೆ ತೆರಳುತ್ತಿರುವ ಭಾರತದ ಎರಡನೇ ಗಗನಯಾನಿಯಾಗಿದ್ದಾರೆ. 1984ರಲ್ಲಿ ಭಾರತದ ರಾಕೇಶ್‌ ಶರ್ಮಾ ಅವರು ರಷ್ಯಾದ ಗಗನನೌಕೆಯಲ್ಲಿ ಗಗನಯಾನ ಕೈಗೊಂಡಿದ್ದರು. 41 ವರ್ಷಗಳ ಬಳಿಕ, ಭಾರತದ ಮತ್ತೊಬ್ಬ ಗಗನಯಾನಿ ಅಂತರಿಕ್ಷ ಯಾತ್ರೆ ಕೈಗೊಳ್ಳುತ್ತಿದ್ದಾರೆ.

ಜೂನ್‌ 10ರಂದು ಬೆಳಿಗ್ಗೆ 5.52ಕ್ಕೆ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್‌ –9 ರಾಕೆಟ್‌, ಗಗನಯಾನಿಗಳಿರುವ ‘ಡ್ರ್ಯಾಗನ್’ ವ್ಯೋಮನೌಕೆಯನ್ನು ಹೊತ್ತು ಐಎಸ್‌ಎಸ್‌ನತ್ತ ಹಾರಲಿದೆ. ಜೂನ್‌ 11ರಂದು ತಡರಾತ್ರಿ 12.30ಕ್ಕೆ (ಭಾರತೀಯ ಕಾಲಮಾನ ರಾತ್ರಿ 10.30) ಡ್ರ್ಯಾಗನ್‌ ಗಗನನೌಕೆಯನ್ನು ಐಎಸ್‌ಎಸ್‌ನೊಂದಿಗೆ ಜೋಡಣೆ (ಡಾಕಿಂಗ್) ಗೊಳ್ಳಲಿದೆ.

ADVERTISEMENT

‘ಆ್ಯಕ್ಸಿಯಂ–4’ ಕಾರ್ಯಕ್ರಮದ ಭಾಗವಾಗಿ ಐಎಸ್‌ಎಸ್‌ಗೆ ತೆರಳುತ್ತಿರುವ ಶುಕ್ಲಾ ಅವರೊಂದಿಗೆ, ಕಮಾಂಡರ್ ಪೆಗ್ಗಿ ವಿಟ್ಸನ್, ಹಂಗರಿಯ ಟಿಬೊರ್ ಕಾಪು ಹಾಗೂ ಪೋಲಂಡ್‌ನ ಸ್ಲಾವೋಸ್‌ ಯು.ವಿನ್ಸೀವ್ಸ್‌ಕಿ ಪಯಣಿಸಲಿದ್ದಾರೆ. 

‘ಇದು ಅದ್ಭುತವಾದ ಪಯಣವಾಗಿದೆ. ನಿಮಗಿಂತ ದೊಡ್ಡದಾಗಿರುವ ಯಾವುದೋ ಒಂದರ ಭಾಗವಾಗುತ್ತಿದ್ದೀರಿ ಎಂದು ಹೇಳುವ ಕ್ಷಣಗಳಿವು. ಇದರ ಭಾಗವಾಗಲು ನಾನು ಎಷ್ಟೊಂದು ಅದೃಷ್ಟಶಾಲಿ ಎಂದಷ್ಟೇ ಹೇಳಬಲ್ಲೆ’ ಎಂದು ಶುಕ್ಲಾ ಅವರು ಆ್ಯಕ್ಸಿಮಾ ಸ್ಪೇಸ್‌ ಬಿಡುಗಡೆ ಮಾಡಿರುವ ಕಿರು ವಿಡಿಯೊದಲ್ಲಿ ಹೇಳಿದ್ದಾರೆ.

‘ಶುಕ್ಸ್‌’ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಶುಕ್ಲಾ ಅವರು ಲಖನೌದಲ್ಲಿ ಜನಿಸಿದವರು. 

‘ಶುಕ್ಸ್‌ನ ಬುದ್ಧಿವಂತಿಕೆ ಹಾಗೂ ಜ್ಞಾನವು ಅವರಿಗೆ 130 ವರ್ಷ ವಯಸ್ಸಾಗಿರಬಹುದು ಎಂದು ತೋರಿಸುತ್ತದೆ’ ಎಂದು ಬಣ್ಣಿಸುತ್ತಾರೆ 1980ರಿಂದ ಅಂತರಿಕ್ಷಯಾನ ಕೈಗೊಳ್ಳುತ್ತಿರುವ ಹಂಗೇರಿಯಾದ ಗಗನಯಾನಿ ಟಿಬೊರ್ ಕಾಪು.

‘ಡ್ರ್ಯಾಗನ್’ ವ್ಯೋಮನೌಕೆಯಲ್ಲಿ ನನ್ನ ಪೈಲಟ್‌ ಆಗಿ ಶುಕ್ಲಾ ಇರುವುದು ಅದ್ಭುತವಾದ ಸಂಗತಿ. ಬಾಹ್ಯಾಕಾಶ ನೌಕೆಯ ತಂತ್ರಜ್ಞಾನ ವಿಷಯದಲ್ಲಿ ಅವರು ಅಪರಿಮಿತ ಜ್ಞಾನ ಹೊಂದಿದ್ದಾರೆ’ ಎಂದು ಶ್ಲಾಘಿಸಿದರು.

‘ಶುಕ್ಲಾ ಅವರು ಕೆಲಸದ ಕಡೆ ಗಮನ ಹರಿಸುತ್ತಾರೆ ಹಾಗೂ ಸಂದರ್ಭಗಳಿಗೆ ತ್ವರಿತವಾಗಿ ಸ್ಪಂದಿಸುತ್ತಾರೆ’ ಎಂದು ಸ್ಲಾವೋಸ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.