ADVERTISEMENT

ಪ್ರಧಾನಿಗೆ ತಲೆಬಾಗಿ ನಮಿಸಿದ ಪನ್ನೀರ್‌ ಸೆಲ್ವಂ, ಫೋಟೊ ಹಿಂದಿನ ನಿಜ ಸಂಗತಿ ಏನು?

​ಪ್ರಜಾವಾಣಿ ವಾರ್ತೆ
Published 30 ಜುಲೈ 2018, 7:55 IST
Last Updated 30 ಜುಲೈ 2018, 7:55 IST
   

ಬೆಂಗಳೂರು: ತಮಿಳುನಾಡಿನ ಉಪಮುಖ್ಯಮಂತ್ರಿ ಒ.ಪನ್ನೀರ್‌ ಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಲೆಬಾಗಿ ನಮಿಸುತ್ತಿರುವ ಫೋಟೊವೊಂದು ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.2018, ಜುಲೈ 26 ರಂದು Suby (@Subytweets) ಎಂಬ ಖಾತೆಯಿಂದ ಈ ಫೋಟೊ ಟ್ವೀಟ್ ಆಗಿತ್ತು.

ನರೇಂದ್ರ ಮೋದಿ ತಮಿಳ್ನಾಡಿಗೆ ಬಂದಾಗ #gobackmodi ಎಂಬ ಹ್ಯಾಶ್‍ಟ್ಯಾಗ್ ಟ್ರೆಂಡ್ ಆಗಿದ್ದನ್ನು ಯಾರೂ ಮರೆತಿರಲ್ಲ. ಹೀಗಿರುವಾಗ ಆರಾಜ್ಯದ ಉಪ ಮುಖ್ಯಮಂತ್ರಿ ಮೋದಿಯವರ ಮುಂದೆ ವಿಧೇಯತೆಯಿಂದ ತಲೆಬಾಗಿ ನಮಸ್ಕರಿಸುತ್ತಿರುವುದನ್ನು ನೋಡಿ ಜನರಿಗೆ ಗೊಂದಲವುಂಟಾಗಿದ್ದು ಸಹಜ.

ಈ ಫೋಟೊ ಹಳೇದ್ದು!

ADVERTISEMENT


ಈ ಫೋಟೊದ ಸತ್ಯಾಸತ್ಯತೆಯ ಬಗ್ಗೆ ಪರಿಶೀಲಿಸಿದ ಆಲ್ಟ್ ನ್ಯೂಸ್ ಹಲವಾರು ತಮಿಳು ಲೇಖನಗಳಲ್ಲಿ ಈ ಫೋಟೊ ಬಳಕೆಯಾಗಿದೆ ಎಂದಿದೆ.2017 ಸೆಪ್ಟೆಂಬರ್ 9ರಂದು ವಿಕಟನ್ ಪತ್ರಿಕೆಯಲ್ಲಿ ಇದೇ ಫೋಟೊ ಬಳಕೆಯಾಗಿದೆ.ಬಿಜೆಪಿ ಎಐಎಡಿಎಂಕೆಯೊಂದಿಗೆ ಕಾರ್ಯ ನಿರ್ವಹಿಸಲಿದೆಯೇ? 18 ವ್ಯಾಪಕ ಘಟನೆಗಳು- ವಿಕಟನ್ ಎಕ್ಸ್ ಕ್ಲೂಸಿವ್ ಎಂಬ ಶೀರ್ಷಿಕೆಯೊಂದಿಗೆ ಈ ಫೋಟೊ ಬಳಕೆಯಾಗಿದೆ.ಪನ್ನೀರ್- ಮೋದಿ ಭೇಟಿ ಎಂಬ ಶೀರ್ಷಿಕೆಯನ್ನು ಈ ಫೋಟೊಗೆ ನೀಡಲಾಗಿದೆ.

ಫೋಟೊ ಹಿಂದಿನ ನಿಜ ಸಂಗತಿ ಏನು?

ಆಲ್ಟ್ ನ್ಯೂಸ್ ಈ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್‍ನಲ್ಲಿ ಸರ್ಚ್ ಮಾಡಿದಾಗ 2018 ಫೆಬ್ರುವರಿ 18ರಂದು ಎನ್‍ಡಿಟಿವಿಯಲ್ಲಿ ಪ್ರಕಟವಾದ ಸುದ್ದಿಯೊಂದರಲ್ಲಿ ಪನ್ನೀರ್ ಸೆಲ್ವಂ ಮತ್ತು ಮೋದಿ ಭೇಟಿಯ ಚಿತ್ರವಿದೆ.ಪ್ರಧಾನಿ ಮೋದಿಯವರ ಸಲಹೆಯಂತೆ ನಾನು ಸಚಿವನಾದೆ: ಪನ್ನೀರ್ ಸೆಲ್ವಂ ಎಂಬ ಶೀರ್ಷಿಕೆಯಿರುವ ಫೋಟೊದಲ್ಲಿ ಪನ್ನೀರ್ ಅವರು ಮೋದಿ ಎದುರು ಕುಳಿತುಕೊಂಡಿದ್ದಾರೆ. ಡಿಸೆಂಬರ್ 2016ರಲ್ಲಿ ಇವರಿಬ್ಬರು ಭೇಟಿ ಆದಾಗ ಪ್ರೆಸ್ ಇನ್ಫಾರ್ಮೇಶನ್ ಬ್ಯುರೋ (ಪಿಐಬಿ) ಕ್ಲಿಕ್ಕಿಸಿದ ಫೋಟೊ ಇದಾಗಿದೆ.

ಟ್ವಿಟರ್‌ನಲ್ಲಿ 'O. Panneerselvam' 'from:@PIB_India' ಎಂದು ಸರ್ಚ್ ಮಾಡಿದಾಗ ಇದೇ ಸಂದರ್ಭದಲ್ಲಿ ಕ್ಲಿಕಿಸಿದ ಫೋಟೊ ಟ್ವೀಟ್‍ಗಳು ಸಿಕ್ಕಿವೆ.ಆದರೆ ಅದರಲ್ಲಿ ಎಲ್ಲಿಯೂ ಪನ್ನೀರ್ ಅವರು ಮೋದಿ ಮುಂದೆ ತಲೆಬಾಗಿನಮಸ್ಕರಿಸುವ ಚಿತ್ರ ಇಲ್ಲ.

ಇದು ಫೋಟೊಶಾಪ್ ಕೈಚಳಕ!

ಗೂಗಲ್‍ನಲ್ಲಿ 'O.Panneerselvam bow' ಎಂಬ ಕೀವರ್ಡ್ ಸರ್ಚ್ ಮಾಡಿದಾಗ ಒ.ಪನ್ನೀರ್ ಸೆಲ್ವಂ ಅವರು ತಮಿಳ್ನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮುಂದೆ ತಲೆಬಾಗಿ ನಮಸ್ಕರಿಸುವ ಫೋಟೊ ಸಿಗುತ್ತದೆ.

ಚೆನ್ನೈನಲ್ಲಿ ಶನಿವಾರ ನೂತನ ಮುಖ್ಯಮಂತ್ರಿಯಾಗಿ ಜಯಲಲಿತಾ ಅವರು ಪ್ರತಿಜ್ಞೆ ಸ್ವೀಕಾರ ಮಾಡಿದ ನಂತರ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್ ಸೆಲ್ವಂ ಅವರು ಶಿರಬಾಗಿ ನಮಸ್ಕರಿಸುತ್ತಿರುವುದು ಎಂಬ ಶೀರ್ಷಿಕೆಯನ್ನು ಈ ಫೋಟೊಗೆ ನೀಡಲಾಗಿದೆ. ಈ ಫೋಟೊ ಪಿಟಿಐ ಸುದ್ದಿಸಂಸ್ಥೆಯ ಸಂಗ್ರಹ ಚಿತ್ರ.

ಅಂದಹಾಗೆ ಪನ್ನೀರ್ ಮೋದಿಯವರೆಗೆ ನಮಸ್ಕರಿಸುತ್ತಿರುವ ಯಾವುದೇ ಫೋಟೊಗಳು ಸಿಕ್ಕಿಲ್ಲ.ಹಾಗೊಂದು ಫೋಟೊ ಇಲ್ಲವೇ ಇಲ್ಲ.ಅಂದರೆ,ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‍ಲೋಡ್ ಆಗಿರುವ ಆ ಚಿತ್ರ ಫೋಟೊಶಾಪ್ ಚಿತ್ರವಾಗಿದೆ.ಎಲ್ಲ ಮೂಲಗಳನ್ನು ಜಾಲಾಡಿ ನೋಡಿದಾಗ ಜಯಲಲಿತಾ ಅವರಿಗೆ ಪನ್ನೀರ್ ನಮಸ್ಕರಿಸುತ್ತಿರುವ ಚಿತ್ರವನ್ನು ಕತ್ತರಿಸಿ ಮೋದಿಯವರಿಗೆ ನಮಸ್ಕರಿಸುತ್ತಿರುವಂತೆ ಮಾಡಿದ್ದು ಫೋಟೊಶಾಪ್ ಕೈಚಳಕ ಎಂಬುದು ಇಲ್ಲಿ ಸಾಬೀತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.