ಮುಂಬೈ: ಮೊಘಲ್ ದೊರೆ ಔರಂಗಜೇಬ್ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಹೋಲಿಸಿ ನೀಡಿರುವ ಹೇಳಿಕೆ ವಿಚಾರ ಅಧಿವೇಶನದಲ್ಲಿ ಕೋಲಾಹಲ ಸೃಷ್ಟಿಸಿತು. ವಿವಾದಾಸ್ಪದ ಹೇಳಿಕೆ ನೀಡಿದ ನಾಯಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಾಯುತಿ ನಾಯಕರು ಸೋಮವಾರ ಒತ್ತಾಯಿಸಿದರು.
ಮಹಾರಾಷ್ಟ್ರದ ವಿಧಾನಮಂಡಲದ ಉಭಯ ಸದನಗಳಲ್ಲಿ ಈ ವಿಚಾರ ಪ್ರತಿಧ್ವನಿಸಿತು. ಈ ಹೇಳಿಕೆ ನೀಡಿರುವ ಕಾಂಗ್ರೆಸ್‌ನ ಹರ್ಷವರ್ಧನ್ ವಸಂತರಾವ್ ಸಪಕಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಡಳಿತ ಪಕ್ಷದ ಶಾಸಕರು ಒತ್ತಾಯಿಸಿದರು.
ಉಪಮುಖ್ಯಮಂತ್ರಿ ಅಜಿತ್ ಪವಾರ್ (ಎನ್‌ಸಿಪಿ) ಹಾಗೂ ಕಂದಾಯ ಸಚಿವ ಚಂದ್ರಶೇಖರ್ ಬಾವಂಕುಲೆ (ಬಿಜೆಪಿ) ಅವರು ಮಾತನಾಡಿ, ‘ಹೇಳಿಕೆ ಕುರಿತು ವಿಸ್ತೃತವಾಗಿ ತನಿಖೆ ನಡೆಸಿ, ಸಪಕಾಳ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
‘ಪಕ್ಷದ ಹಿರಿಯ ನಾಯಕರ ಗಮನಸೆಳೆಯಲು ಇಂತಹ ಹೇಳಿಕೆ ನೀಡಿದ್ದಾರೆ. ಅವರ ನೈಜ ಬಣ್ಣ ಬಯಲಾಗಿದೆ. ಮುಖ್ಯವಾದ ಹುದ್ದೆಯಲ್ಲಿದ್ದು, ಇಂತಹ ಹೇಳಿಕೆ ನೀಡಿರುವ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಅಜಿತ್ ಪವಾರ್ ತಿಳಿಸಿದರು.
ಸಪಕಾಳ್ ಮೇಲಿನ ಆರೋಪವನ್ನು ತಳ್ಳಿಹಾಕಿದ ಕಾಂಗ್ರೆಸ್ ನಾಯಕ ಭಾಯಿ ಜಗತಾಪ್, ‘ಅಂತಹ ಹೇಳಿಕೆಯನ್ನೇ ನೀಡಿಲ್ಲ’ ಎಂದು ತಿಳಿಸಿದರು.
ಔರಂಗಜೇಬ್ ಒಬ್ಬ ಕ್ರೂರ ಆಡಳಿತಗಾರ. ಈಗ ರಾಜ್ಯದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಕೂಡ ಅಷ್ಟೇ ಸಮಾನವಾದ ಕ್ರೂರ ಆಡಳಿತಗಾರರು. ಅವರು ಯಾವಾಗಲೂ ಧರ್ಮ ಆಧಾರಿತ ವಿಚಾರವನ್ನು ಬೆಂಬಲಿಸುತ್ತಾರೆ. ಆದರೆ ಸರಪಂಚ್ ಸಂತೋಷ್ ದೇಶ್‌ಮುಖ್ ಕೊಲೆ ಪ್ರಕರಣದ ಬಗ್ಗೆ ಏನೂ ಮಾಡುತ್ತಿಲ್ಲ.–ಹರ್ಷವರ್ಧನ್ ವಸಂತರಾವ್ ಸಪಕಾಳ್–ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.