ADVERTISEMENT

ಜಾರ್ಖಂಡ್ | 4 ಸಾವಿರ ನಕಲಿ ಜನನ ಪ್ರಮಾಣಪತ್ರ ವಿತರಣೆ: ಐವರ ಬಂಧನ

ಪಿಟಿಐ
Published 6 ಮೇ 2025, 13:27 IST
Last Updated 6 ಮೇ 2025, 13:27 IST
<div class="paragraphs"><p>ಬಂಧನ </p></div>

ಬಂಧನ

   

ಜಮ್ಶೆಡ್‌ಪುರ: ಯಾವುದೇ ಪೂರಕ ದಾಖಲೆಗಳಿಲ್ಲದೆ ಸುಮಾರು ನಾಲ್ಕು ಸಾವಿರ ಜನನ ಪ್ರಮಾಣಪತ್ರಗಳನ್ನು ವಿತರಿಸಿದ ಪಂಚಾಯ್ತಿ ಕಾರ್ಯದರ್ಶಿ ಸಹಿತ ಐವರನ್ನು ಜಾರ್ಖಂಡ್‌ನ ಪೂರ್ವ ಸಿಂಘ್‌ಭಮ್‌ ಜಿಲ್ಲೆಯಲ್ಲಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

‘2023ರ ಜನವರಿಯಿಂದ ಮತಿಯಬಂಧಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 4,281 ನಕಲಿ ಜನನ ಪ್ರಮಾಣಪತ್ರಗಳನ್ನು ವಿತರಿಸಿರುವುದು ಪತ್ತೆಯಾಗಿತ್ತು. ಪ್ರಕರಣ ಕುರಿತು ಬಿಡಿಒ ಆರತಿ ಮುಂಡ ಅವರು ದೂರು ದಾಖಲಿಸಿದ್ದರು’ ಎಂದು ಜಿಲ್ಲಾಧಿಕಾರಿ ಅನನ್ಯಾ ಮಿತ್ತಲ್‌ ತಿಳಿಸಿದ್ದಾರೆ. ಈ ಪ್ರಕರಣ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕಿಶೋರ್ ಕೌಶಲ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ.

ADVERTISEMENT

ಪಂಚಾಯ್ತಿ ಕಾರ್ಯದರ್ಶಿ ಸುನಿಲ್ ಮಹತೊ (59), ಸಾರ್ವಜನಿಕ ಸೇವಾ ಕೇಂದ್ರದ ಸಪ್ನಾ ಕುಮಾರ್ ಮಹತೊ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

ಸುಮಾರು ಮೂರು ಸಾವಿರ ಬಾಂಗ್ಲಾದೇಶದ ನುಸುಳುಕೋರರಿಗೆ ಅಕ್ರಮವಾಗಿ ಜನನ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್ ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ 13 ಬಾಂಗ್ಲಾದೇಶಿಯರನ್ನು ಉಲ್ಲೇಖಿಸಿದ್ದರು. ಜತೆಗೆ, ಬಂಧಿತರೆಲ್ಲರ ಜನನ ದಿನಾಂಕವನ್ನು ಜ. 1 ಎಂದು ನಮೂದಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದನ್ನು ಹೇಳಿದ್ದರು.

ಕೃತ್ಯಕ್ಕೆ ಬಳಸಿದ ಕಂಪ್ಯೂಟರ್‌ಗಳು, ಪ್ರಿಂಟರ್‌, ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಮತ್ತು ಇದೇ ಪಂಚಾಯ್ತಿಗೆ ಸೇರಿದ 190 ಪ್ರಮಾಣಪತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.