ನವದೆಹಲಿ: ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಸರ್ಕಾರವು ದೇಣಿಗೆ ಕೋರಿ ಬ್ಯಾಂಕ್ ಖಾತೆಯನ್ನು ತೆರೆದಿದೆ ಎಂದು ಹೇಳುವ 'ದಾರಿ ತಪ್ಪಿಸುವ' ಸಂದೇಶವು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಎಂದು ರಕ್ಷಣಾ ಸಚಿವಾಲಯ ಭಾನುವಾರ ಎಚ್ಚರಿಸಿದೆ.
ಇದು ನಕಲಿ ಸಂದೇಶವಾಗಿದ್ದು, ಜಾಗರೂಕರಾಗಿರಿ, ಅಂತಹ ಮೋಸದ ಸಂದೇಶಗಳಿಗೆ ಬಲಿಯಾಗಬೇಡಿ ಎಂದು ಜನರನ್ನು ಸಚಿವಾಲಯ ಎಚ್ಚರಿಸಿದೆ.
ಭಾರತೀಯ ಸೇನೆಯ ಆಧುನೀಕರಣಕ್ಕಾಗಿ ಮತ್ತು ಕಾರ್ಯಾಚರಣೆಯಲ್ಲಿ ಗಾಯಗೊಂಡ ಅಥವಾ ಹುತಾತ್ಮರಾದ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ನಿರ್ದಿಷ್ಟ ಬ್ಯಾಂಕ್ ಖಾತೆಗೆ ದೇಣಿಗೆ ನೀಡುವ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ದಾರಿ ತಪ್ಪಿಸುವ ಸಂದೇಶವು ಹರಿದಾಡುತ್ತಿದೆ ಎಂದು ಹೇಳಿಕೆ ತಿಳಿಸಿದೆ.
ಸಚಿವ ಸಂಪುಟ ನಿರ್ಧಾರ ಕೈಗೊಂಡಿದೆ ಎಂದು ಸುಳ್ಳು ವಿವರ ನೀಡಲಾಗಿದೆ. ನಟ ಅಕ್ಷಯ್ ಕುಮಾರ್ ಅವರ ಹೆಸರನ್ನು ಈ ಪ್ರಸ್ತಾವನೆಯ ಪ್ರಮುಖ ಪ್ರೇರಕ ಎಂದು ಉಲ್ಲೇಖಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಸಂದೇಶದಲ್ಲಿ ನೀಡಲಾದ ಬ್ಯಾಂಕ್ ಖಾತೆಯ ವಿವರಗಳು ಸುಳ್ಳು ಎಂದು ಅದು ಹೇಳಿದೆ.
ಸರ್ಕಾರವು ಸಕ್ರಿಯ ಯುದ್ಧ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಅಥವಾ ಅಂಗವಿಕಲರಾದ ಸೈನಿಕರಿಗಾಗಿ ಹಲವು ಕಲ್ಯಾಣ ಯೋಜನೆಗಳನ್ನು ಪ್ರಾರಂಭಿಸಿದೆ ಎಂದು ಸಚಿವಾಲಯ ಹೇಳಿದೆ.
2020ರಲ್ಲಿ ಕೇಂದ್ರ ಸರ್ಕಾರವು 'ಸಶಸ್ತ್ರ ಪಡೆಗಳ ಯುದ್ಧ ಅಪಘಾತ ಕಲ್ಯಾಣ ನಿಧಿಯನ್ನು ಸ್ಥಾಪಿಸಿತ್ತು. ಇದನ್ನು ಸಕ್ರಿಯ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಹುತಾತ್ಮರಾದ ಅಥವಾ ತೀವ್ರವಾಗಿ ಗಾಯಗೊಂಡ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಸಿಬ್ಬಂದಿ ಕುಟುಂಬಗಳಿಗೆ ತಕ್ಷಣದ ಆರ್ಥಿಕ ನೆರವು ನೀಡಲು ಬಳಸಲಾಗುತ್ತದೆ ಎಂದು ಅದು ಹೇಳಿದೆ.
PIB ಸಹ ಫ್ಯಾಕ್ಟ್ ಚೆಕ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ದಾರಿ ತಪ್ಪಿಸುವ ಸಂದೇಶದ ಬಗ್ಗೆ ಜನರನ್ನು ಎಚ್ಚರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.