ADVERTISEMENT

ಲೋಕೊ ಪೈಲಟ್‌ ಸಾಫ್ಟ್‌ ಡ್ರಿಂಕ್, ಮೌತ್‌ ವಾಶ್ ಸೇವನೆ ನಿಷೇಧ: ದಕ್ಷಿಣ ರೈಲ್ವೆ

ದಕ್ಷಿಣ ರೈಲ್ವೆಯ ತಿರುವನಂತಪುರ ವಿಭಾಗದಿಂದ ಸುತ್ತೋಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 0:30 IST
Last Updated 21 ಫೆಬ್ರುವರಿ 2025, 0:30 IST
   

ನವದೆಹಲಿ: ಬ್ರೀತ್ ಅನಲೈಸರ್‌ನಿಂದ (ಅಲ್ಕೋಹಾಲ್‌ ಸೇವನೆ ಪತ್ತೆ ಮಾಡುವ ಸಾಧನ) ಪರೀಕ್ಷೆ ನಡೆಸುವ ವೇಳೆ, ತಪ್ಪು ಫಲಿತಾಂಶಕ್ಕೆ ಕಾರಣವಾಗುತ್ತಿರುವ ಕೆಲ ಪದಾರ್ಥಗಳನ್ನು ಲೋಕೊ ಪೈಲಟ್‌ಗಳು ಸೇವಿಸುವುದನ್ನು ದಕ್ಷಿಣ ರೈಲ್ವೆಯ ತಿರುವನಂತಪುರ ವಿಭಾಗ ನಿಷೇಧಿಸಿದೆ.

ಈ ಸಂಬಂಧ ರೈಲ್ವೆ ವಿಭಾಗವು, ಫೆ.18ರಂದು ಸುತ್ತೋಲೆ ಹೊರಡಿಸಿದ್ದು, ಇದರಿಂದ ಲೋಕೊ ಪೈಲಟ್‌ಗಳ ನಿಯೋಜನೆ ಹಾಗೂ ರೈಲುಗಳ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಿದೆ.

‘ಕೆಲ ಸಿಬ್ಬಂದಿ ಹಾಜರಾತಿ ನೀಡುವಾಗ ಬ್ರೀತ್‌ ಅನಲೈಸರ್‌ ಬಳಸಿ ಪರೀಕ್ಷೆಗೆ ಒಳಪಡಿಸಲಾಯಿತು. ಈ ವೇಳೆ, ಅವರು ಹೊರಹಾಕಿದ ಉಸಿರಿನಲ್ಲಿ ಅಲ್ಕೋಹಾಲ್ ಇರುವುದು ಪತ್ತೆಯಾಗಿದೆ. ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಕಂಡುಬಂದಿದೆ’ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.

ADVERTISEMENT

‘ಸಿಬ್ಬಂದಿಯು ಹೊಮಿಯೋಪಥಿ ಔಷಧ ತೆಗೆದುಕೊಂಡಾಗ, ಸಾಫ್ಟ್‌ ಡ್ರಿಂಕ್ಸ್, ಮೌಥ್ ವಾಶ್, ಕೆಮ್ಮಿನ ಸಿರಪ್‌, ಎಳನೀರು ಹಾಗೂ ಕೆಲ ಹಣ್ಣುಗಳ ಸೇವನೆ ಮಾಡಿದಾಗ ಇಂತಹ ಫಲಿತಾಂಶ ಬಂದಿದೆ. ಆದರೆ, ಇಂತಹ ಸಿಬ್ಬಂದಿಯ ರಕ್ತದ ಮಾದರಿಯನ್ನು ಸರ್ಕಾರಿ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ, ಬಹುತೇಕ ಎಲ್ಲ ರಕ್ತದ ಮಾದರಿಗಳಲ್ಲಿ ಅಲ್ಕೋಹಾಲ್‌ ಅಂಶ ಕಂಡುಬಂದಿಲ್ಲ’ ಎಂದು ವಿವರಿಸಲಾಗಿದೆ.

‘ಸಿಬ್ಬಂದಿ ಹೊರಬಿಟ್ಟ ಉಸಿರಿನಲ್ಲಿ ಅಲ್ಲೋಹಾಲ್‌ ಅಂಶ ಪತ್ತೆಯಾಗಿರುವುದು ಸಾಕಷ್ಟು ಗೊಂದಲ ಮೂಡಿಸಿದ್ದು, ರೈಲುಗಳ ಕಾರ್ಯಾಚರಣೆಗೆ ಸಿಬ್ಬಂದಿ ನಿಯೋಜನೆ ಮಾಡುವುದರ ಮೇಲೆಯೂ ಪರಿಣಾಮ ಬೀರಿದೆ. ಹೀಗಾಗಿ, ಮೇಲೆ ಉಲ್ಲೇಖಿಸಿರುವ ಪದಾರ್ಥಗಳನ್ನು ಲೋಕೊ ಪೈಲಟ್‌ಗಳು ಸೇವಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

‘ಅನಿವಾರ್ಯ ಸಂದರ್ಭಗಳಲ್ಲಿ, ಇಂತಹ ಯಾವುದೇ ಪದಾರ್ಥವನ್ನು ಸೇವಿಸಲು ಲೋಕೊ ಪೈಲಟ್‌ಗಳು ಬಯಸಿದಲ್ಲಿ, ಈ ಕುರಿತು ಹಾಜರಾತಿಗೂ ಮುನ್ನ (ಸೈನಿಂಗ್‌ ಇನ್‌ ಅಥವಾ ಸೈನಿಂಗ್‌ ಔಟ್) ಕರ್ತವ್ಯದ ಮೇಲಿರುವ ಸಂಬಂಧಪಟ್ಟ ಕ್ರೂ ಕಂಟ್ರೋಲರ್‌ (ಸಿಆರ್‌ಸಿ) ಅವರಿಗೆ ಲಿಖಿತವಾಗಿ ತಿಳಿಸಬೇಕು’.

‘ಅಲ್ಕೋಹಾಲ್‌ ಇರುವ ಔಷಧ ಸೇವಿಸಬೇಕಾದ ಸಂದರ್ಭದಲ್ಲಿ, ರೈಲ್ವೆ ವೈದ್ಯಾಧಿಕಾರಿಗಳ ಅನುಮೋದನೆ ಪಡೆದು, ಅಂತಹ ಔಷಧ ಸೇವನೆ ಮುಂದುವರಿಸಬಹುದು’ ಎಂದೂ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.