ADVERTISEMENT

ಲಖಿಂಪುರ | ಮರಣೋತ್ತರ ಪರೀಕ್ಷೆ ವರದಿ ನಂತರ ಶವಸಂಸ್ಕಾರ: ಎರಡು ಕುಟುಂಬಗಳ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2021, 11:05 IST
Last Updated 5 ಅಕ್ಟೋಬರ್ 2021, 11:05 IST
ಲಖಿಂಪುರ ಖೇರಿ ದುರ್ಘಟನೆಯಲ್ಲಿ ಮಡಿದವರ ಶವ
ಲಖಿಂಪುರ ಖೇರಿ ದುರ್ಘಟನೆಯಲ್ಲಿ ಮಡಿದವರ ಶವ    

ಲಖಿಂಪುರ: ಉತ್ತರ ಪ್ರದೇಶದ ಲಖಿಂಪುರ ಖೇರಿಯ ಟಿಕುನಿಯಾ ಎಂಬಲ್ಲಿ ಭಾನುವಾರ ನಡೆದ ದುರ್ಘಟನೆ ವೇಳೆ ಮಡಿದ ನಾಲ್ವರು ರೈತರ ಪೈಕಿ ಇಬ್ಬರು ರೈತರ ಕುಟುಂಬಗಳು ಮೃತದೇಹಗಳ ಮರಣೋತ್ತರ ವರದಿ ಬರುವ ವರೆಗೆ ಅಂತಿಮ ಸಂಸ್ಕಾರ ನಡೆಸದಿರಲು ನಿರ್ಧರಿಸಿವೆ.

ಅಂತ್ಯಸಂಸ್ಕಾರ ನಡೆಸದೇ ಇರುವ ನಿರ್ಧಾರವನ್ನು ಕುಟುಂಬಸ್ಥರು ತೆಗೆದುಕೊಳ್ಳುತ್ತಲೇ ಲಖನೌ ಐಜಿಪಿ ಲಕ್ಷ್ಮಿ ಸಿಂಗ್‌ ಟಿಕುನಿಯಾಕ್ಕೆ ದೌಡಾಯಿಸಿದರು. ಮೃತ ರೈತ ನಚ್ಚತಾರ್‌ ಸಿಂಗ್‌ ಮನೆಗೆ ತೆರಳಿದ ಅವರು, ಈ ವಿಷಯವಾಗಿ ಕುಟುಂಬಸ್ಥರ ಜೊತೆಗೆ ಚರ್ಚೆ ನಡೆಸಿದರು. ಮೃತ ರೈತನ ಮನೆಯ ಬಳಿ ಭಾರಿ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು ಎಂದು ವರದಿಯಾಗಿದೆ.

ಮತ್ತೊಬ್ಬ ರೈತ ಲವ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರವನ್ನೂ ಕುಟುಂಬಸ್ಥರು ನಿಲ್ಲಿಸಿದ್ದಾರೆ. ಅಂತ್ಯಸಂಸ್ಕಾರದ ನಂತರ ಪೊಲೀಸರು ಮರಣೋತ್ತರ ವರದಿಯನ್ನು ತಿರುಚುವ ಸಾಧ್ಯತೆಗಳಿವೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ADVERTISEMENT

ಪರಿಹಾರ ಸೇರಿದಂತೆ ಅವರ ಕುಟುಂಬಗಳ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡ ನಂತರ ಸೋಮವಾರ ಸಂಜೆ ವೈದ್ಯರ ತಂಡವು ರೈತರ ಮರಣೋತ್ತರ ಪರೀಕ್ಷೆಯನ್ನು ನಡೆಸಿತು. ಮರಣೋತ್ತರ ಪರೀಕ್ಷೆ ನಂತರ ಶವಗಳನ್ನು ಸೋಮವಾರ ತಡರಾತ್ರಿ ಕುಟುಂಬಗಳಿಗೆ ಹಿಂತಿರುಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.