ಬೆಂಗಳೂರು: 'ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತರಾಗಿರುವ 16 ಜನರನ್ನು ಕೂಡಲೇ ಜಾಮೀನಿನ ಬಿಡುಗಡೆ ಮಾಡಬೇಕು' ಎಂದು ಈ ಪ್ರಕರಣದಲ್ಲಿ ಬಂಧಿತರಾಗಿರುವ ಪ್ರೊ. ಹನಿ ಬಾಬು ಅವರ ಕುಟುಂಬವು ಬಹಿರಂಗ ಪತ್ರ ಬರೆದಿದೆ.
ಭೀಮಾ ಕೋರೇಗಾಂವ್-ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ನಮ್ಮ ದೇಶದ 16 ಜನ ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಹದಿನಾರು ಜನರನ್ನು ಬಿಕೆ-16 (ಭೀಮಾ ಕೋರೇಗಾಂವ್-16) ಎಂದು ಕರೆಯಲಾಗುತ್ತದೆ. ಅವರಲ್ಲಿ ಒಬ್ಬರಾದ ಪ್ರೊ. ಹನಿ ಬಾಬು ಅವರ ಕುಟುಂಬದವರಾದ ನಾವು, ಈಗ ನಮ್ಮ ದೇಶಬಾಂಧವರನ್ನು ಉದ್ದೇಶಿಸಿ ಈ ಪತ್ರ ಬರೆಯುತ್ತಿದ್ದೇವೆ.
ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಸಹ-ಪ್ರಾಧ್ಯಾಪಕರಾಗಿರುವ ಹನಿ ಬಾಬು ಎಂ. ಟಿ. ಅವರು ಭಾಷಾಶಾಸ್ತ್ರದ ವಿದ್ವಾಂಸರು. ಅವರು ಒಬ್ಬ ಅಂಬೇಡ್ಕರ್‌ವಾದಿ ಮತ್ತು ಸಾಮಾಜಿಕ ಕಾರ್ಯಕರ್ತ.
ಈಗ ಬಂಧನದಲ್ಲಿರುವ ಬಿಕೆ-16 ಜನರ ಮೇಲೆ, ಒಬ್ಬರನ್ನು ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪ ಇದೆ. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳ ಕಂಪ್ಯೂಟರ್‌ಗಳಲ್ಲಿ ಕೆಲವು ಪತ್ರಗಳು ಪತ್ತೆಯಾಗಿವೆ ಎಂಬುವಲ್ಲಿಗೆ ಬಂದು ಪ್ರಕರಣದ ತನಿಖೆ ನಿಂತಿದೆ. ಈ ಪತ್ರಗಳಲ್ಲಿ ಯಾವ ಆರೋಪಿಗಳ ಸಹಿಯೂ ಇಲ್ಲ. ಆ ಪತ್ರಗಳು ಸಾಚಾ ಸಾಕ್ಷ್ಯಗಳು ಎಂದು ಸಾಬೀತು ಮಾಡುವಲ್ಲಿ ತನಿಖಾ ಸಂಸ್ಥೆಯೂ ವಿಫಲವಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೋನಾ ವಿಲ್ಸನ್ ಅವರ ಲ್ಯಾಪ್‌ಟಾಪ್‌ಗೆ ಹ್ಯಾಕರ್ ಒಬ್ಬ ಕೆಲವು ಕಡತಗಳನ್ನು ಸೇರಿಸಿದ್ದಾನೆ ಎಂಬುದನ್ನು ಅಮೆರಿಕದ ಆರ್ಸೆನಲ್ ಕನ್ಸಲ್ಟಿಂಗ್ ಕಂಪನಿ ತನ್ನ ಪರಿಶೋಧನಾ ವರದಿಯಲ್ಲಿ ಹೇಳಿದೆ. ರೋನಾ ಅವರ ಲ್ಯಾಪ್‌ಟಾಪ್‌ನ ಡಿಜಿಟಲ್ ಪ್ರತಿಯನ್ನು ನ್ಯಾಯಾಲಯದ ಮೂಲಕ ಪಡೆದು ಅರ್ಸೆನಲ್ ಕಂಪನಿಗೆ ಪರಿಶೋಧನೆಗೆಂದು ನೀಡಲಾಗಿತ್ತು. ರೋನಾ ವಿಲ್ಸನ್ ಅವರು ತಮ್ಮ ಗೆಳೆಯರಿಗೆ ಬರೆದಿದ್ದಾರೆ ಎನ್ನಲಾದ ಪತ್ರಗಳನ್ನು ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ. ಆದರೆ ಆ ಪತ್ರಗಳನ್ನು ಹ್ಯಾಕಿಂಗ್ ಮೂಲಕ ಸೇರಿಸಲಾಗಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಇದು ಒಂದು ಸುಳ್ಳಿನ ಪ್ರಕರಣ, ವಿಚಾರಣೆ.
ಆದರೆ ಈ ಸಾಕ್ಷ್ಯಗಳ ಡಿಜಿಟಲ್ ಪ್ರತಿಗಳನ್ನು ನೀಡುವಂತೆ ಮಾಡಿಕೊಂಡಿರುವ ಮನವಿಗೆ ಇನ್ನೂ ಪುರಸ್ಕಾರ ದೊರೆತಿಲ್ಲ. 2018ರಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದರೂ, ಬಂಧಿತರಲ್ಲಿ ಒಬ್ಬರ ವಿರುದ್ಧವೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಆರೋಪಟ್ಟಿ ಸಲ್ಲಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಕಲೆಹಾಕಿರುವ ಭೌತಿಕ ಸಾಕ್ಷ್ಯಗಳು, ಕಂಪ್ಯೂಟರ್-ಲ್ಯಾಪ್‌ಟಾಪ್-ಹಾರ್ಡ್‌ಡಿಸ್ಕ್‌ಗಳ ನಕಲು ಪ್ರತಿಯನ್ನು, ಆರೋಪಿಗಳ ವಕೀಲರಿಗೆ ನೀಡುತ್ತಿಲ್ಲ. ಇದು ಆರೋಪಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ. ಬಂಧಿತರಿಂದ ಸಂಗ್ರಹಿಸಿರುವ ಭೌತಿಕ ಸಾಕ್ಷ್ಯಗಳ ಪ್ರತಿಗಳನ್ನು ವಕೀಲರಿಗೆ ನೀಡಲು ನ್ಯಾಯಾಲಯವು ಸೂಚಿಸಬೇಕು. ಆಗ ಆ ಸಾಕ್ಷ್ಯಗಳು ಸಾಚಾ ಆಗಿವೆಯೇ ಅಥವಾ ಅವುಗಳನ್ನು ತಿರುಚಲಾಗಿದೆಯೇ ಎಂಬುದನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಹೀಗಾಗಿ ತಕ್ಷಣವೇ ನ್ಯಾಯಾಲಯವು ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು.
ಆದರೆ ಆರೋಪಪಟ್ಟಿಯೂ ಸಲ್ಲಿಕೆಯಾಗದಂತೆ ತಡೆಯಲಾಗುತ್ತಿದೆ. ಸಾಕ್ಷ್ಯಗಳ ಪ್ರತಿಗಳೂ ಆರೋಪಿಗಳಿಗೆ ಸಿಗದಂತೆ ತಡೆಯಲಾಗುತ್ತಿದೆ. ತಮ್ಮ ಪರವಾಗಿ ಹೋರಾಡುವ ಪ್ರಜಾಸತ್ತಾತ್ಮಕ ಹಕ್ಕನ್ನೇ ಈ ಪ್ರಕರಣದಲ್ಲಿ ಆರೋಪಿಗಳಿಂದ ಕಸಿದುಕೊಳ್ಳಲಾಗಿದೆ.ಅದರಿಂದಾಗಿ ತಾವು ನಿರಪರಾಧಿಗಳು ಎಂದು ಸಾಬೀತು ಮಾಡುವುದು ಅವರಿಗೆ ದುಸ್ಸಾಧ್ಯವಾಗಿದೆ. ಇಲ್ಲಿ ವಿಳಂಬ ನೀತಿಯ ಮೂಲಕ ನ್ಯಾಯವನ್ನು ನಿರಾಕರಿಸಲಾಗುತ್ತಿದೆ. ಇಲ್ಲಿ ನ್ಯಾಯದಾನಕ್ಕೆ ದೇಶದ ಪ್ರಭುತ್ವೇ ತಡೆಯೊಡ್ಡುತ್ತಿದೆ.
ಯಾವುದೇ ನಿಯಗಳನ್ನು ಪಾಲಿಸದೇ ಹನಿ ಬಾಬು ಅವರನ್ನು ಬಂಧಿಸಲಾಗಿದೆ. ಅವರ ಕಂಪ್ಯಟೂರ್, ಪುಸ್ತಕಗಳನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅವೆಲ್ಲವನ್ನೂ ತನಿಖಾಧಿಕಾರಿಗಳು ತಿರುಚದೇ ಇರಲಾರರು ಎಂದು ನಾವು ದೃಢವಾಗಿ ನಂಬಿದ್ದೇವೆ. ಹೀಗಾಗಿಯೇ ಈ ಸಾಕ್ಷ್ಯಗಳನ್ನು ಎನ್‌ಐಎಯು ನ್ಯಾಯಲಾಯಕ್ಕೆ ಸಲ್ಲಿಸುತ್ತಲೂ ಇಲ್ಲ, ಅವುಗಳ ಪ್ರತಿಯನ್ನು ನಮಗೆ ನೀಡುತ್ತಲೂ ಇಲ್ಲ. ಇಷ್ಟಾದರೂ, ನ್ಯಾಯಾಲಯವು ತಾನು ಸ್ವಯಂಪ್ರೇರಿತವಾಗಿ ಇದು ಯಾವುದನ್ನೂ ಗಣನೆಗೆ ತೆಗೆದುಕೊಂಡಿಲ್ಲ. ಮೊಕದ್ದಮೆಯ ‘ಸಾಕ್ಷ್ಯ’ಗಳು ಎಂದು ಪ್ರಭುತ್ತ್ವವು ಮುಂದಿಟ್ಟಿರುವ ಮಾಹಿತಿಯ ಸಮಗ್ರ, ಸ್ವತಂತ್ರ ತನಿಖೆಗೆ ಆಗಲಿ, ವಿಧಿವೈಜ್ಞಾನಿಕ ವಿಶ್ಲೇಷಣೆಗೆ ಆಗಲಿ ಆದೇಶ ನೀಡಿಲ್ಲ. ಇದು ಮಹಾಸೋಜಿಗದ ಸಂಗತಿ.
ಹಾಗಾಗಿ, ಈ ಬಂಧನಗಳೆಲ್ಲವೂ ಒಂದು ಷಡ್ಯಂತ್ರದ ಭಾಗ. ಈವರೆಗೆ, ದಸ್ತಗಿರಿಯಾದ ಯಾರೊಬ್ಬರ ವಿರುದ್ಧವೂ ಯಾವುದೇ ನ್ಯಾಯಾಲಯದಲ್ಲಿಯೂ ಆರೋಪಪಟ್ಟಿಯ ಸಲ್ಲಿಕೆಯಾಗಿಲ್ಲ. ಪ್ರತಿಸಲವೂ, ‘ಹೊಸದಾಗಿ ಬಂಧನಕ್ಕೊಳಗಾದವರ ವಿಚಾರಣೆ ನಡೆಯಬೇಕಿದೆ. ಹಾಗೂ ಹೊಸ ಸಾಕ್ಷ್ಯಗಳನ್ನು ಪರೀಕ್ಷಿಸಬೇಕಿದೆ’ ಎಂಬ ನೆವವೊಡ್ಡುತ್ತಲೇ ಆರೋಪಪಟ್ಟಿಯ ಸಲ್ಲಿಕೆಯನ್ನು ಮುಂದೂಡಲಾಗುತ್ತಿದೆ.
ಈ ಪ್ರಕರಣದಲ್ಲಿ ಬಂಧಿತರಾಗಿರುವವರ ವಿರುದ್ಧ ಸಾಕ್ಷ್ಯಗಳನ್ನು ಹೇಳಿ ಎಂದು ಹನಿ ಬಾಬು ಅವರ ಮೇಲೆ ತನಿಖಾಧಿಕಾರಿಗಳು ಒತ್ತಡ ಹೇರಿದ್ದರು ಎಂದು ಸ್ವತಃ ಹನಿ ಬಾಬು ಅವರೇ ನಮಗೆ ತಿಳಿಸಿದ್ದಾರೆ. ಎಲ್ಲಾ ಬಂಧಿತರ ಮೇಲೂ ಈ ರೀತಿ ಒತ್ತಡ ಹೇರಲಾಗಿದೆ. ಜೈಲುಗಳಲ್ಲೂ ಕೋವಿಡ್ ಪ್ರಕರಣಗಳು ತೀವ್ರವಾಗುತ್ತಿವೆ. ಹಲವು ದೇಶಗಳು ತಮ್ಮ ರಾಜಕೀಯ ಕೈದಿಗಳನ್ನು ಕೋವಿಡ್‌ನ ಕಾರಣಕ್ಕೆ ಬಿಡುಗಡೆ ಮಾಡಿವೆ. ಆದರೆ ನಮ್ಮಲ್ಲಿ ಆಗುತ್ತಿರುವುದೇ ಬೇರೆ. ನಮ್ಮ ಬಿಕೆ-16 ಜನರು ಜಾಮೀನು ಬೇಡಿ ಮತ್ತೆಮತ್ತೆ ಅರ್ಜಿ ಸಲ್ಲಿಸುತ್ತಿದ್ದರೂ ಅವೆಲ್ಲವೂ, ಅವರ ವಯಸ್ಸು ಮತ್ತು ಆರೋಗ್ಯದ ಪರಿಸ್ಥಿತಿಯನ್ನು ಕೂಡ ಲೆಕ್ಕಿಸದೆ, ಮತ್ತೆಮತ್ತೆ ತಿರಸ್ಕರಿಸಲಾಗುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ.
ಈಚೆಗೆ ಸುಪ್ರೀಂ ಕೋರ್ಟ್, 'ಅಪರಾಧ ಪ್ರಕರಣವು ಎಂಥದೇ ಇರಲಿ, ಬಂಧಿತರು ಎಂಥವರೇ ಇರಲಿ, ಅವರ ನ್ಯಾಯಾಂಗ ವಿಚಾರಣೆಯು ತ್ವರಿತವಾಗಿ ನಡೆದು ಮುಗಿಯಬೇಕು. ಅದು ಹಾಗಾಗಬೇಕಾದದ್ದು ಅವರ ಮೂಲಭೂತ ಹಕ್ಕು. ಆ ಹಕ್ಕು ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧಿತರಾದವರಿಗೂ ಇದೆ' ಎಂದು ಬಹಳ ಸ್ಪಷ್ಟವಾಗಿ ಘೋಷಿಸಿದೆ. ಹೀಗಾಗಿ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗುವವರೆಗೂ ಬಂಧಿತರನ್ನು ಅವರ ಆರೋಗ್ಯದ ದೃಷ್ಠಿಯಿಂದ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯವನ್ನು ಕೇಳಿಕೊಳ್ಳುತ್ತೇವೆ.
ಸಹಿಮಾಡಿದವರು: ಪ್ರೊ.ಹನಿ ಬಾಬು ಅವರ ಕುಟುಂಬದವರು
ಜೆನ್ನೀ (ಪತ್ನಿ)
ಫರ್ಜಾ಼ನಾ (ಮಗಳು)
ಫಾತಿಮಾ (ತಾಯಿ)
ಹ್ಯಾರಿಶ್, ಹಾಗೂ ಅನ್ಸಾರಿ (ಸೋದರರು)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.