ADVERTISEMENT

ಕೃಷಿ ಕಾಯ್ದೆಗಳ ಅಮಾನತು ಪ್ರಸ್ತಾವನೆಗೆ ಸರ್ಕಾರ ಬದ್ಧ: ಪ್ರಧಾನಿ ಮೋದಿ

ಏಜೆನ್ಸೀಸ್
Published 30 ಜನವರಿ 2021, 11:51 IST
Last Updated 30 ಜನವರಿ 2021, 11:51 IST
ಬಜೆಟ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ
ಬಜೆಟ್‌ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ವರೆಗೂ ಅಮಾನತಿನಲ್ಲಿಡುವ ಪ್ರಸ್ತಾವನೆಗೆ ಸರ್ಕಾರ ಬದ್ಧವಾಗಿದೆ ಎಂದು ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸೋಮವಾರ ಕೇಂದ್ರ ಬಜೆಟ್‌ ಮಂಡನೆಯ ಹಿನ್ನೆಲೆಯಲ್ಲಿ ಪ್ರಧಾನಿ ನೇತೃತ್ವದಲ್ಲಿ ಶನಿವಾರ ಸರ್ವ ಪಕ್ಷ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, 'ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮತ್ತು ರೈತ ಮುಖಂಡರೊಂದಿಗೆ ನಡೆದಿರುವ 11ನೇ ಸುತ್ತಿನ ಮಾತುಕತೆಯಲ್ಲಿ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಕೊಡುಗೆಗೆ ಇಂದಿಗೂ ಬದ್ಧವಾಗಿದೆ' ಎಂದಿದ್ದಾರೆ.

ಹೊಸ ಕೃಷಿ ಸುಧಾರಣಾ ಕಾಯ್ದೆಗಳನ್ನು 18 ತಿಂಗಳು ಅಮಾನತಿನಲ್ಲಿಡುವುದಾಗಿ ಸರ್ಕಾರ ಪ್ರಸ್ತಾಪಿಸಿದೆ, ಆದರೆ ಪ್ರತಿಭಟನಾ ನಿರತ ರೈತರು ಹಾಗೂ ವಿರೋಧ ಪಕ್ಷಗಳು ಕಾಯ್ದೆಗಳನ್ನು ರದ್ದು ಪಡಿಸುವಂತೆ ಒತ್ತಾಯಿಸಿವೆ. ಈ ಕುರಿತು ಮಾತನಾಡಿರುವ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, 'ಸರ್ಕಾರವು ಚರ್ಚೆ ನಡೆಸಲು ಮುಕ್ತವಾಗಿರುವುದಾಗಿ ಕೃಷಿ ಸಚಿವ ತೋಮರ್‌ ತಿಳಿಸಿದ್ದಾರೆ; ನಾನು (ತೋಮರ್‌) ಮಾತುಕತೆಗೆ ಸಿದ್ಧವಿದ್ದೇನೆ, ಕೇವಲ ಒಂದು ಫೋನ್‌ ಕರೆಯ ಅಂತರದಲ್ಲಿದಲ್ಲಿರುವುದಾಗಿ ತಿಳಿಸಿದ್ದಾರೆ' ಎಂದು ಜೋಶಿ ಹೇಳಿದರು.

ADVERTISEMENT

ವಿರೋಧ ಪಕ್ಷಗಳು ಚರ್ಚಿಸಲು ಬಯಸುತ್ತಿರುವ ಹಲವು ವಿಚಾರಗಳ ಕುರಿತು ಬಜೆಟ್‌ ಅಧಿವೇಶನದ ದ್ವಿತಿಯಾರ್ಧದಲ್ಲಿ ಚರ್ಚಿಸಲಾಗುತ್ತದೆ. ಸಂಸತ್ತಿನಲ್ಲಿ ದೊಡ್ಡ ಪಕ್ಷಗಳು ಚರ್ಚೆಗಳಿಗೆ ಅಡ್ಡಿ ಉಂಟು ಮಾಡುವುದರಿಂದ ಕಡಿಮೆ ಸದಸ್ಯ ಬಲದ ಪಕ್ಷಗಳಿಗೆ ಅನಾನುಕೂಲವಾಗುತ್ತದೆ. ಸದನದಲ್ಲಿ ಮಾತನಾಡಲು ಸಣ್ಣ ಪಕ್ಷಗಳಿಗೆ ಹೆಚ್ಚಿನ ಕಾಲಾವಕಾಶ ಸಿಗಬೇಕಿದೆ ಎಂದರು.

ಬಜೆಟ್‌ ಅಧಿವೇಶನದಲ್ಲಿಯೇ ಮಹಿಳಾ ಮೀಸಲಾತಿ ಮಸೂದೆಗೆ ಅನುಮೋದನೆ ಪಡೆಯುವಂತೆ ಒಡಿಶಾ ಮುಖ್ಯಮಂತ್ರಿ ಮತ್ತು ಬಿಜೆಡಿ ಅಧ್ಯಕ್ಷ ನವೀನ್‌ ಪಟ್ನಾಯಕ್‌ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ಎಂದು ವರದಿಯಾಗಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಡಿ ಪಕ್ಷವು 21 ಲೋಕಸಭಾ ಕ್ಷೇತ್ರಗಳ ಪೈಕಿ ಏಳು ಸ್ಥಾನಗಳಲ್ಲಿ ಮಹಿಳೆಯರಿಗೆ ಟಿಕೆಟ್‌ ನೀಡಿತ್ತು.

1996ರ ಸೆಪ್ಟೆಂಬರ್‌ 12ರಂದು ದೇವೇಗೌಡ ಅವರ ನೇತೃತ್ವದ ಸರ್ಕಾರದಲ್ಲಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಲಾಗಿತ್ತು. ಮಹಿಳಾ ಮೀಸಲಾತಿ ಮಸೂದೆಯು 2010ರಲ್ಲಿ ರಾಜ್ಯ ಸಭೆಯಲ್ಲಿ ಅನುಮೋದನೆ ಪಡೆದಿತ್ತು.

ಮೂರು ಕೃಷಿ ಕಾಯ್ದೆಗಳು

* ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಿಗೆ ಕಾಯ್ದೆ

* ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ ಮತ್ತು ನೆರವು) ಕಾಯ್ದೆ

* ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.