ADVERTISEMENT

ಸರ್ಕಾರ ಬಯಸುವುದು ಷರತ್ತುಬದ್ಧ ಮಾತುಕತೆ, ಇದು ನಮಗೆ ಬೇಕಿಲ್ಲ‌: ರಾಕೇಶ್ ಟಿಕಾಯತ್

​ಪ್ರಜಾವಾಣಿ ವಾರ್ತೆ
Published 9 ಜುಲೈ 2021, 21:57 IST
Last Updated 9 ಜುಲೈ 2021, 21:57 IST
ರಾಕೇಶ್ ಟಿಕಾಯತ್‌
ರಾಕೇಶ್ ಟಿಕಾಯತ್‌   

ನವದೆಹಲಿ: ಕೇಂದ್ರದ ಮೂರು ಕೃಷಿಕಾಯ್ದೆಗಳ ವಿರುದ್ಧ ಕಳೆದ ಏಳು ತಿಂಗಳಿಂದ ನಡೆಸುತ್ತಿರುವ ಪ್ರತಿಭಟನೆ ಕೈಬಿಟ್ಟು ಸರ್ಕಾರದ ಜತೆಗೆ ಮಾತುಕತೆಗೆ ಬನ್ನಿ ಎಂದು ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾಡಿದ ಮನವಿಯನ್ನು ರೈತರು ಶುಕ್ರವಾರ ತಿರಸ್ಕರಿಸಿದ್ದಾರೆ.

‘ಸರ್ಕಾರ ಬಯಸುವುದು ಷರತ್ತುಬದ್ಧ ಮಾತುಕತೆ. ಇಂಥ ಮಾತುಕತೆ ನಮಗೆ ಬೇಕಿಲ್ಲ‌’ ಎಂದು ಭಾರತೀಯ ಕಿಸಾನ್‌ ಯೂನಿಯನ್‌ ನಾಯಕ ರಾಕೇಶ್ ಟಿಕಾಯತ್‌ ಹೇಳಿದ್ದಾರೆ. ಮೂರು ಕೃಷಿ ಕಾಯ್ದೆಗಳ ರದ್ದತಿಗಾಗಿನ ಹೋರಾಟವನ್ನು ಕೈಬಿಡುವಂತೆ ಕೇಂದ್ರ ಸರ್ಕಾರ ಮಾಡಿದ ಮನವಿಯನ್ನು ರೈತರು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಕೃಷಿ ಮೂಲಸೌಕರ್ಯ ನಿಧಿಯ ಅಡಿಯಲ್ಲಿ (ಎಐಎಫ್‌), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ) ಕೂಡ ಇನ್ನು ಮುಂದೆ ನೆರವು ಪಡೆಯಬಹುದು ಎಂದು ತೋಮರ್‌ ಗುರುವಾರ ಪ್ರಕಟಿಸಿದ್ದರು. ಆದರೆ, ಕೃಷಿ ಕಾಯ್ದೆಗಳಿಂದಾಗಿ ಎಪಿಎಂಸಿಗಳು ಮುಚ್ಚಿ ಹೋಗುತ್ತವೆ ಎಂಬ ಭಯ ರೈತರದು.

ADVERTISEMENT

ಎಐಎಫ್‌ ವ್ಯಾಪ್ತಿಗೆ ಬರುವುದರಿಂದ ಎಪಿಎಂಸಿಗಳ ಬಲವರ್ಧನೆ ಸಾಧ್ಯ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಹೇಳಿದ್ದರು.

ಆದರೆ, ಸರ್ಕಾರದ ಈ ವಾದವನ್ನು ಅಲ್ಲಗಳೆದಿರುವ ರಾಕೇಶ್‌ ಟಿಕಾಯತ್, ಖಾಸಗಿ ಮಾರುಕಟ್ಟೆಗಳಿಗೆ ಸಿಗುವಷ್ಟು ವಹಿವಾಟು ಎಪಿಎಂಸಿಗಳಿಗೆ ಸಿಗದು ಎಂದಿದ್ದಾರೆ.

‘ಈ ಋತುವಿನಲ್ಲಿ, ಮಧ್ಯಪ್ರದೇಶದ 38 ಎಪಿಎಂಸಿಗಳ ಪೈಕಿ ಒಂದು ಸಮಿತಿಯು ಕೂಡ ಒಂದೇ ಒಂದು ಕ್ವಿಂಟಲ್‌ನಷ್ಟು ಗೋಧಿಯ ವಹಿವಾಟನ್ನು ನಡೆಸಿಲ್ಲ. ಬಹಳಷ್ಟು ಎಪಿಎಂಸಿಗಳಿಗೆ, ತಮ್ಮ ಸಿಬ್ಬಂದಿಗೆ ಸಂಬಳ ಕೊಡಲೂ ಹಣವಿಲ್ಲ. ಮುಂದಿನ
ಕೆಲ ವರ್ಷಗಳಲ್ಲಿ, ಕಡಿಮೆ ತೆರಿಗೆ ಭರಿಸುವ ಸೌಲಭ್ಯವಿರುವ ಖಾಸಗಿ ಮಾರುಕಟ್ಟೆ ಸಂಸ್ಥೆಗಳ ಏಳಿಗೆಯಾಗಿ, ಎಪಿಎಂಸಿ
ಗಳು ಬಾಗಿಲು ಹಾಕುವುದು ನಿಶ್ಚಿತ’ ಎಂದು ಕಳವಳ ವ್ಯಕ್ತಪಡಿಸಿದರು.‌

ಕಳೆದ ವರ್ಷ ನ.26ರಿಂದ, ದೆಹಲಿಯ ಗಾಜಿಪುರ, ಸಿಂಘು ಹಾಗೂ ಟಿಕ್ರಿ ಗಡಿಯಲ್ಲಿ ಪಂಜಾಬ್‌. ಹರಿಯಾಣ ಉತ್ತರ ಪ್ರದೇಶದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಬೆಳೆಯ ಕಟಾವಿಗೆ ತೆರಳಿರುವುದರಿಂದ ಹಾಗೂ
ಬೇಸಿಗೆ ಬೆಳೆಯ ಸಿದ್ಧತೆಗಾಗಿ ಹಳ್ಳಿಗಳಿಗೆ ಮರಳಿರುವುದರಿಂದ, ಕಳೆದ ಒಂದೆರಡು ತಿಂಗಳಿನಲ್ಲಿ ಪ್ರತಿಭಟನಾ ಸ್ಥಳಗಳಲ್ಲಿ ರೈತರ ಸಂಖ್ಯೆ ತುಸು ಕಡಿಮೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.