ADVERTISEMENT

ಕೃಷಿ ಕಾಯ್ದೆಗಳು ಹಿಂದಕ್ಕೆ: ಉಭಯ ಸದನಗಳಲ್ಲಿ ಚರ್ಚೆ ಇಲ್ಲದೆ ಮಸೂದೆಗೆ ಒಪ್ಪಿಗೆ

ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಉಭಯ ಸದನಗಳ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2021, 19:50 IST
Last Updated 29 ನವೆಂಬರ್ 2021, 19:50 IST
ರಾಜ್ಯ ಸಭೆ
ರಾಜ್ಯ ಸಭೆ   

ನವದೆಹಲಿ:ಕೃಷಿ ಕ್ಷೇತ್ರದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗೆ ಸಂಸತ್ತು ಸೋಮವಾರ ಆತುರದಲ್ಲಿ ಧ್ವನಿಮತದ ಒಪ್ಪಿಗೆ ನೀಡಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಸೂದೆ ಮಂಡನೆಯಾಗಿ, ಲೋಕಸಭೆ ಮತ್ತು ರಾಜ್ಯಸಭೆಯ ಅಂಗೀಕಾರವನ್ನೂ ಪಡೆದುಕೊಂಡಿದೆ. ಚರ್ಚೆ ಆಗಬೇಕು ಎಂಬ ವಿರೋಧ ಪಕ್ಷಗಳ ಆಗ್ರಹಕ್ಕೆ ಸರ್ಕಾರವು ಮಣಿಯಲಿಲ್ಲ.

ಲೋಕಸಭೆಯಲ್ಲಿ ಕೇವಲ ಮೂರು ನಿಮಿಷದಲ್ಲಿ ಮತ್ತು ರಾಜ್ಯಸಭೆಯಲ್ಲಿ ಒಂಬತ್ತು ನಿಮಿಷದಲ್ಲಿ ‘ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆ 2021’ಕ್ಕೆ ಒಪ್ಪಿಗೆ ಕೊಡಲಾಯಿತು.

ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಯ ಮೇಲೆ ಚರ್ಚೆ ಆಗಬೇಕು ಎಂದು ಲೋಕಸಭೆ ಮತ್ತು ರಾಜ್ಯಸಭೆಯ ಕಲಾಪ ಸಲಹಾ ಸಮಿತಿಯ ಸಭೆಯಲ್ಲಿಯೇ ವಿರೋಧ ಪಕ್ಷಗಳು ಒತ್ತಾಯಿಸಿದ್ದವು. ಸರ್ಕಾರ ಅದಕ್ಕೆ ಒಪ್ಪಲಿಲ್ಲ. ಹಾಗಾಗಿ, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ಕಲಾಪ ಸಲಹಾ ಸಮಿತಿ ಸಭೆಯಲ್ಲಿಯೇ ಜಟಾಪಟಿ ಆರಂಭವಾಗಿತ್ತು.

ADVERTISEMENT

ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಮಸೂದೆಗಳ ಮೇಲೆ ಚರ್ಚೆಗೆ ಅವಕಾಶ ಇಲ್ಲ ಎಂದು ಸಚಿವರು ಹೇಳಿದರು. ಆದರೆ, ಮೀಸಾ ಮತ್ತು ‍ಪೋಟಾ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಸಂದರ್ಭಗಳಲ್ಲಿ ಚರ್ಚೆ ಆಗಿದೆ ಎಂದು ವಿರೋಧ ಪಕ್ಷಗಳ ಸದಸ್ಯರು ನೆನಪಿಸಿದರು ಎಂದು ಮೂಲಗಳು ತಿಳಿಸಿವೆ.

ಮಸೂದೆಯ ಮೇಲೆ ಚರ್ಚೆಯ ಅಗತ್ಯವೇ ಇಲ್ಲ ಎಂದು ಹಿರಿಯ ಸಚಿವರೊಬ್ಬರು ಹೇಳಿದ್ದಕ್ಕೆ ವಿರೋಧ ಪಕ್ಷಗಳ ಸಂಸದರು ಬಲವಾದ ವಿರೋಧ ದಾಖಲಿಸಿದರು. ಚರ್ಚೆ ಬೇಕೇ ಬೇಡವೇ ಎಂಬ ವಾಗ್ವಾದ ಇದ್ದ ಕಾರಣ ರಾಜ್ಯಸಭೆಯ ಕಲಾಪ ಸಲಹಾ ಸಮಿತಿಯಲ್ಲಿ, ಮಸೂದೆಯ ಮಂಡನೆಯ ವಿಚಾರವನ್ನೇ ಕೈಗೆತ್ತಿಕೊಂಡಿಲ್ಲ.

ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರು ಮಸೂದೆ ಮಂಡನೆ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಆದರೆ, ಮಸೂದೆಯು ಲೋಕಸಭೆಯಲ್ಲಿ ಅಂಗೀಕಾರವಾದ ಬಳಿಕ ರಾಜ್ಯಸಭೆಯಲ್ಲಿಯೂ ಮಂಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಂಡಿತು.

ಮೂರು ಕಾಯ್ದೆಗಳನ್ನು 2020ರ ಸೆಪ್ಟೆಂಬರ್‌ನಲ್ಲಿ ಜಾರಿಗೆ ತರಲಾಗಿತ್ತು. ಕಾಯ್ದೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ರೈತರು ಭಾರಿ ಪ್ರತಿಭಟನೆ ನಡೆಸಿದ್ದರು. ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿಯವರು ನವೆಂಬರ್‌ 19ರಂದು ಘೋಷಿಸಿದ್ದರು. ವರ್ಷದ ಬಳಿಕವೂ ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತರಿ ಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ.

12 ಸದಸ್ಯರ ಅಮಾನತು: ಅಧಿವೇಶನ ಬಹಿಷ್ಕಾರಕ್ಕೆ ವಿಪಕ್ಷ ಯೋಚನೆ

ಮುಂಗಾರು ಅಧಿವೇಶನದಲ್ಲಿ ‘ದುರ್ವರ್ತನೆ, ಉದ್ಧಟತನ, ಅಶಿಸ್ತು ಮತ್ತು ಹಿಂಸಾತ್ಮಕ ವರ್ತನೆ’ ತೋರಿದ ಅರೋಪದಲ್ಲಿ ರಾಜ್ಯಸಭೆಯ 12 ಸದಸ್ಯರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ. ವಿರೋಧ ಪಕ್ಷಗಳ ಜತೆಗೆ ಮುಖಾಮುಖಿಗೆ ಸರ್ಕಾರವು ವೇದಿಕೆ ಸಜ್ಜು ಮಾಡಿದೆ ಎಂಬುದಾಗಿ ಇದನ್ನು ವಿಶ್ಲೇಷಿಸಲಾಗಿದೆ. ಇಡೀ ಅಧಿವೇಶನ ಬಹಿಷ್ಕರಿಸುವ ಬಗ್ಗೆ ವಿರೋಧ ಪಕ್ಷಗಳು ಯೋಚನೆ ಮಾಡುತ್ತಿವೆ.

ಅಮಾನತಾದವರಲ್ಲಿ ಕಾಂಗ್ರೆಸ್‌ನ ಆರು, ಶಿವಸೇನಾ ಮತ್ತು ಟಿಎಂಸಿಯ ತಲಾ ಇಬ್ಬರು, ಸಿಪಿಎಂ ಮತ್ತು ಸಿಪಿಐಯ ತಲಾ ಒಬ್ಬರು ಸಂಸದರು ಇದ್ದಾರೆ. 12 ಸಂಸದರಲ್ಲಿ ಐವರು ಮಹಿಳೆಯರಿದ್ದಾರೆ. ಕಾಂಗ್ರೆಸ್‌ನ ಸಯ್ಯದ್‌ ನಾಸಿರ್ ಹುಸೇನ್‌, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಸಿಪಿಎಂನ ಎಳಮರಂ ಕರೀಂ ಅಮಾನತಾದವರಲ್ಲಿ ಸೇರಿದ್ದಾರೆ.

ಸಂಸದರನ್ನು ಅಮಾನತು ಮಾಡಿದ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿವೆ.

‘ಅನಪೇಕ್ಷಿತ ಮತ್ತು ಪ್ರಜಾಸತ್ತಾತ್ಮಕವಲ್ಲದ ರೀತಿಯಲ್ಲಿ, ನಿಯಮಗಳನ್ನು ಉಲ್ಲಂಘಿಸಿ ಸಂಸದರನ್ನು ಅಮಾನತು ಮಾಡಿದ್ದಕ್ಕೆ ಖಂಡನೆ’ ಎಂದು ಕಾಂಗ್ರೆಸ್‌, ಡಿಎಂಕೆ, ಎಸ್‌ಪಿ, ಎನ್‌ಸಿಪಿ ಸೇರಿ 13 ಪಕ್ಷಗಳು ಜಂಟಿ ಹೇಳಿಕೆ ನೀಡಿವೆ.

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಲಿರುವ ಸಭೆಯಲ್ಲಿ ಇಡೀ ಅಧಿವೇಶನ ಬಹಿಷ್ಕಾರದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಟಿಎಂಸಿಯನ್ನು ಬಿಟ್ಟು ಉಳಿದ ವಿರೋಧ ಪಕ್ಷಗಳ ನಾಯಕರು ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಸಂಜೆಯೂ ಸಭೆ ನಡೆಸಿದ್ದಾರೆ.

ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ ಜೋಶಿ ಅವರು ಕೃಷಿ ಕಾಯ್ದೆ ಹಿಂದಕ್ಕೆ ಪಡೆಯುವ ಮಸೂದೆಗೆ ಅಂಗೀಕಾರ ಸಿಕ್ಕ ಕೂಡಲೇ 12 ಸದಸ್ಯರನ್ನು ಅಮಾನತು ಮಾಡುವ ನಿರ್ಣಯ ಮಂಡಿಸಿದರು.

ಹಿಂದಿನ ಅಧಿವೇಶನದಲ್ಲಿ ತೋರಿದ ‘ದುರ್ನಡತೆ’ಗೆ ನಂತರದ ಅಧಿವೇಶನದಲ್ಲಿ ಶಿಕ್ಷೆ ವಿಧಿಸುತ್ತಿರುವುದು ಇದೇ ಮೊದಲು.ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಈ ಸಂಸದರು ವರದಿಗಾರರ ಮೇಜಿನ ಮೇಲೆ ಏರುವ ಯತ್ನ ಮಾಡಿದ್ದರು. ಮಾರ್ಷಲ್‌ಗಳ ಜತೆಗೆ ಹೊಡೆದಾಟಕ್ಕೆ ಇಳಿದಿದ್ದರು ಎಂದು ಆರೋಪಿಸಲಾಗಿದೆ.

* ಕಾಯ್ದೆ ಹಿಂದಕ್ಕೆ ಪಡೆಯುವ ಮಸೂದೆ ಬಗ್ಗೆ ಚರ್ಚೆ ಇಲ್ಲ ಎಂಬುದು ಸರಿಯಲ್ಲ. ಇಂತಹ ಕನಿಷ್ಠ 17 ಮಸೂದೆಗಳ ಬಗ್ಗೆ ಈ ಹಿಂದೆ ಚರ್ಚೆ ನಡೆದಿದೆ

- ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆ ವಿರೋಧ ಪಕ್ಷದ ನಾಯಕ

* ಸರ್ಕಾರವು ಎಲ್ಲ ವಿಚಾರಗಳ ಬಗ್ಗೆ ಚರ್ಚೆಗೆ, ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧ. ಆದರೆ, ಸಂಸತ್ತು ಮತ್ತು ಸಭಾಧ್ಯಕ್ಷರ ಘನತೆಯನ್ನು ಕಾಯ್ದುಕೊಳ್ಳಬೇಕು.

-ನರೇಂದ್ರ ಮೋದಿ, ಪ್ರಧಾನಿ

* ಕಾಯ್ದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು, ಚರ್ಚೆಯಿಲ್ಲದೆ ಹಿಂದಕ್ಕೆ ಪಡೆಯಲಾಯಿತು. ನವ ಭಾರತದ ಪ್ರಜಾಪ್ರಭುತ್ವದ ಹೊಸ ಮಾದರಿ ಇದು

- ಒಮರ್‌ ಅಬ್ದುಲ್ಲಾ, ನ್ಯಾಷನಲ್ ಕಾನ್ಫರೆನ್ಸ್‌ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.