ಕೋಲ್ಕತ್ತ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ರೈತ ಮುಖಂಡರಿಗೆ ಆಶ್ವಾಸನೆ ನೀಡಿದ್ದಾರೆ.
ಕೇಂದ್ರದ ಹೊಸ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತು ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಆಗ್ರಹಿಸಿ ನಡೆಸುತ್ತಿರುವ ಹೋರಾಟ ಬೆಂಬಲಿಸುವಂತೆ ಭಾರತೀಯ ಕಿಸಾನ್ ಯೂನಿಯನ್‌ನ ರಾಕೇಶ್ ಟಿಕಾಯತ್ ಮತ್ತು ಯುಧ್‌ವೀರ್ ಸಿಂಗ್ ನೇತೃತ್ವದಲ್ಲಿ ರೈತ ಮುಖಂಡರು ಬುಧವಾರ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಿ, ಮನವಿ ಮಾಡಿದರು.
ರೈತ ನಾಯಕರೊಂದಿಗೆ ಚರ್ಚಿಸಿದ ಮಮತಾ ಅವರು, ಯಾವುದೇ ಸಾರ್ವಜನಿಕ ನೀತಿಯ ವಿಷಯ ಬಂದಾಗ ರಾಜ್ಯಗಳ ಜತೆಗೆ ಚರ್ಚಿಸುವ ವೇದಿಕೆ ಇರಬೇಕು. ರಾಜ್ಯಗಳ ಮೇಲೆ ದಬ್ಬಾಳಿಕೆ ನಡೆಸುವುದು ಒಕ್ಕೂಟ ವ್ಯವಸ್ಥೆಗೆ ಒಳಿತಲ್ಲ. ಸಾರ್ವಜನಿಕ ನೀತಿ ವಿಷಯಗಳ ಬಗ್ಗೆ ಚರ್ಚಿಸಲು ಮತ್ತು ಅನ್ಯಾಯದ ವಿರುದ್ಧ ಒಟ್ಟಾಗಿ ನಿಲ್ಲಲು ರಾಜ್ಯಗಳು ಒಗ್ಗೂಡುವುದು ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.
ಪಶ್ಚಿಮ ಬಂಗಾಳದ ಭೌಗೋಳಿಕ ಗಡಿಯ ಆಚೆಗೆ ಪಕ್ಷವು ತನ್ನ ಹೆಜ್ಜೆಗುರುತುಗಳನ್ನು ಮೂಡಿಸುವುದಾಗಿ ತೃಣಮೂಲ ಕಾಂಗ್ರೆಸ್ ಘೋಷಿಸಿದ ಕೆಲವೇ ದಿನಗಳಲ್ಲಿ ಉತ್ತರ ಭಾರತ ಮೂಲದ ರೈತ ಸಂಘಗಳ ಹೋರಾಟಕ್ಕೆ ಬ್ಯಾನರ್ಜಿ ಬೆಂಬಲ ಘೋಷಿಸಿದ್ದಾರೆ.
‘ಬಿಜೆಪಿ ಆಡಳಿತವು ಆರೋಗ್ಯ ಕ್ಷೇತ್ರದಿಂದ ಹಿಡಿದು ಕೃಷಿ ಮತ್ತು ಕೈಗಾರಿಕೆಗಳವರೆಗಿನ ಎಲ್ಲ ಕ್ಷೇತ್ರಗಳಿಗೆ ಹಾನಿ ಮಾಡಿದ್ದು, ದೇಶ ನಲುಗುತ್ತಿದೆ. ನಾವು ಪ್ರಾಕೃತಿಕ ಮತ್ತು ರಾಜಕೀಯ ವಿಪತ್ತುಗಳನ್ನು ಎದುರಿಸುತ್ತಿದ್ದೇವೆ’ ಎಂದರು.
‘ರೈತರೊಂದಿಗೆ ಮಾತನಾಡಲು ಯಾಕಿಷ್ಟು ಕಷ್ಟ’ ಎಂದು ಪ್ರಧಾನಿಯನ್ನು ಮಾರ್ಮಿಕವಾಗಿ ಪ್ರಶ್ನಿಸಿದ ಮಮತಾ ‘ಕೋವಿಡ್ 19 ವಿರುದ್ಧ ಹೋರಾಡಲು, ರೈತರಿಗೆ ಮತ್ತು ಉದ್ಯಮಕ್ಕೆ ನೆರವಾಗುವ ನೀತಿಗಳಿಗಾಗಿ ಇಡೀ ಭಾರತ ಎದುರು ನೋಡುತ್ತಿದೆ’ ಹೇಳಿದರು.
‘ಮಮತಾ ಬ್ಯಾನರ್ಜಿ ಅವರ ಚುನಾವಣಾ ವಿಜಯಕ್ಕಾಗಿ ನಾವು ಅವರನ್ನು ಅಭಿನಂದಿಸಲು ಬಂದಿದ್ದೇವೆ. ರೈತರು ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ಕನಿಷ್ಠ ಬೆಂಬಲ ಬೆಲೆ ನೀಡುವ ಬೇಡಿಕೆಗೆ ಅವರ ಬೆಂಬಲವನ್ನೂ ಕೋರುತ್ತೇವೆ’ ಎಂದು ಭಾರತೀಯ ಕಿಸಾನ್ ಯೂನಿಯನ್ ಕಾರ್ಯದರ್ಶಿ ಯುಧ್‌ವೀರ್ ಸಿಂಗ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಹಾಲಿನ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಮಮತಾ ಬ್ಯಾನರ್ಜಿ ಅವರು ಮುಂದೆ ಬಂದಿರುವುದು ಮೆಚ್ಚುವಂತದ್ದು. ಇದು ದೇಶದ ಇತೆರೆಡೆಗೆ ಮಾದರಿ ಕೆಲಸ ಎನಿಸಿಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.