ADVERTISEMENT

ರೈತರು ನಮ್ಮ 'ಅನ್ನದಾತ'ರು: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಏಜೆನ್ಸೀಸ್
Published 30 ಡಿಸೆಂಬರ್ 2020, 6:03 IST
Last Updated 30 ಡಿಸೆಂಬರ್ 2020, 6:03 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್   

ನವದೆಹಲಿ: ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರೈತರು ನಮ್ಮ 'ಅನ್ನದಾತ'ರು ಎಂದು ನುಡಿದಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಾಜನಾಥ್ ಸಿಂಗ್, ಕೆಲವು ಶಕ್ತಿಗಳು ರೈತರಲ್ಲಿ ತಪ್ಪು ಗ್ರಹಿಕೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ನಾವು ಹಲವಾರು ರೈತರೊಂದಿಗೆ ಮಾತನಾಡಿದ್ದೇವೆ. ರೈತರಲ್ಲಿ ನನ್ನ ಏಕ ಮಾತ್ರ ವಿನಂತಿಯೆಂದರೆ 'ಹೌದು' ಅಥವಾ 'ಇಲ್ಲ' ಎಂಬುದರ ಬದಲು ಸಮಗ್ರ ಚರ್ಚೆಯನ್ನು ನಡೆಸೋಣ. ಇದರಿಂದ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ರೈತರನ್ನು ನಕ್ಸಲ್ ಹಾಗೂ ಖಾಲಿಸ್ತಾನಿಗಳು ಎಂದು ಕರೆಯುವುದರ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವರು, ಇಂತಹ ಆರೋಪಗಳನ್ನು ರೈತರ ವಿರುದ್ಧ ಯಾರೂ ಮಾಡಬಾರದು. ನಾವು ಅವರ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೇವೆ. ರೈತರ ಮೇಲಿನ ಗೌರವದಲ್ಲಿ ನಾವು ಶಿರಬಾಗುತ್ತೇವೆ. ಅವರು ನಮ್ಮ ಅನ್ನದಾತರು ಎಂದು ತಿಳಿಸಿದರು.

ADVERTISEMENT

ನಮ್ಮ ಸಿಖ್ಖ್ ಸಹೋದರರು ಯಾವಾಗಲೂ ದೇಶದ ಸಂಸ್ಕೃತಿಯನ್ನು ರಕ್ಷಿಸಿದ್ದಾರೆ. ದೇಶದ ಸ್ವಾಭಿಮಾನವನ್ನು ಕಾಪಾಡಿಕೊಂಡಿರುವುದಕ್ಕೆ ಅವರ ಕೊಡುಗೆಯನ್ನು ಎಂದಿಗೂ ಸ್ಮರಿಸಲಾಗುವುದು. ಅವರ ಪ್ರಾಮಾಣಿಕತೆ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಹೇಳಿದರು.

ಕನಿಷ್ಠ ಬೆಂಬಲ ಬೆಲೆ ಮುಂದುವರಿಯಲಿದೆ ಎಂದು ಸರ್ಕಾರ ಪದೇ ಪದೇ ಹೇಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ನಾಯಕರು ಭರವಸೆಗಳನ್ನು ಈಡೇರಿಸದಿದ್ದಲ್ಲಿ ಜನರು ಅವರನ್ನು ಶಿಕ್ಷಿಸುತ್ತಾರೆ. ನಾವು ರೈತರ ಆದಾಯವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಂಎಸ್‌ಪಿ ಕಾನೂನಿನ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನನಗಿಂತ ಕಿರಿಯರಾಗಿದ್ದು, ಕೃಷಿಯ ಬಗ್ಗೆ ಅವರಿಗಿಂತಲೂ ಹೆಚ್ಚು ನನಗೆ ತಿಳಿದಿದೆ. ಯಾಕೆಂದರೆ ನಾನು ರೈತ ತಾಯಿಯ ಗರ್ಭದಿಂದ ಹುಟ್ಟಿ ಬಂದಿದ್ದೇನೆ. ನಾವು ರೈತರ ವಿರುದ್ಧ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.

ರೈತರ ಬಗ್ಗೆ ಪ್ರತಿಕ್ರಿಯೆ ತೋರುತ್ತಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸುತ್ತಿಲ್ಲ. ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದು, ಇದರಿಂದ ನನಗೆ ನೋವಾಗಿದೆ. ಕೇವಲ ನನಗೆ ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿ ಅವರಿಗೂ ನೋವುಂಟಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.