ADVERTISEMENT

ರೈತರಿಗೆ ಗುಂಡಿಕ್ಕಿ, ಜ.26ರ ಟ್ರಾಕ್ಟರ್ ರ‍್ಯಾಲಿ ಅಡ್ಡಿಗೆ ಸಂಚು: ಒಬ್ಬನ ಸೆರೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2021, 1:24 IST
Last Updated 23 ಜನವರಿ 2021, 1:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆೆ ಗುಂಡಿನ ದಾಳಿ ನಡೆಸಿ ಗಣರಾಜ್ಯೋತ್ಸವದ ದಿನದ ಟ್ರ್ಯಾಕ್ಟರ್ ರ‍್ಯಾಲಿಗೆ ಅಡ್ಡಿಯುಂಟುಮಾಡುವ ಸಂಚು ರೂಪಿಸಿದ್ದ ವ್ಯಕ್ತಿಯೊಬ್ಬನನ್ನು ರೈತರೇ ಹಿಡಿದಿದ್ದಾರೆ.

ಜನವರಿ 22 ರಂದು ಅಪರಿಚಿತ ವ್ಯಕ್ತಿಯನ್ನು ಹಿಡಿದು ರೈತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸ್ ಸಮವಸ್ತ್ರ ಧರಿಸಿ ನಾಲ್ವರು ರೈತ ಮುಖಂಡರ ಮೇಲೆ ಗುಂಡಿನ ದಾಳಿ ನಡೆಸಿ ರ‍್ಯಾಲಿಗೆ ಅಡ್ಡಿಯುಂಟು ಮಾಡುವ ಪಿತೂರಿ ನಡೆಸಿದ್ದಾಗಿ ಬಂಧಿತ ಆರೋಪಿ ಹೇಳಿದ್ದಾನೆ. ಹರಿಯಾಣದ ರಾಯ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಈ ಯೋಜನೆ ಕಾರ್ಯಗತಗೊಳಿಸಲು ನಮಗೆ ತರಬೇತಿ ನೀಡಿದ್ದಾರೆ ಎಂದು ಆರೋಪಿ ಹೇಳಿರುವುದಾಗಿಯೂ ತಿಳಿದುಬಂದಿದೆ.

ADVERTISEMENT

ಕಳೆದ ಸರಿ ಸುಮಾರು ಒಂದೂವರೆ ತಿಂಗಳಿಂದ ರೈತರು ಚಳಿ, ಮಳೆ–ಗಾಳಿ ಲೆಕ್ಕಿಸದೆ ಮೂರೂ ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ದೆಹಲಿಯ ವಿವಿಧ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ಮತ್ತು ಸರ್ಕಾರದ ನಡುವೆ 11 ಸುತ್ತಿನ ಸಂಧಾನ ಮಾತುಕತೆಗಳು ನಡೆದಿವೆ.

ಈ ಮಧ್ಯೆ, ಜನವರಿ 26ರಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಿ ಪ್ರತಿಭಟನೆ ತೀವ್ರಗೊಳಿಸಲು ರೈತರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.