ADVERTISEMENT

ರೈತ ಹೋರಾಟಕ್ಕೆ 9 ತಿಂಗಳು; ಸಿಂಘು ಗಡಿಯಲ್ಲಿ ಎರಡು ದಿನಗಳ ರೈತ ಸಮಾವೇಶ

ಪಿಟಿಐ
Published 26 ಆಗಸ್ಟ್ 2021, 10:17 IST
Last Updated 26 ಆಗಸ್ಟ್ 2021, 10:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು ಗಡಿ ಭಾಗದಲ್ಲಿ ರೈತರು ಹೋರಾಟ ಆರಂಭಿಸಿ ಒಂಬತ್ತು ತಿಂಗಳು ಪೂರ್ಣಗೊಂಡಿದ್ದು, ಇದರ ಅಂಗವಾಗಿ ವಿವಿಧ ರೈತ ಸಂಘಟನೆಗಳು ಪ್ರತಿಭಟನಾ ಸ್ಥಳದಲ್ಲೇ ಗುರುವಾರದಿಂದ ಎರಡು ದಿನಗಳ ಕಾಲ ‘ರಾಷ್ಟ್ರೀಯ ಸಮಾವೇಶ‘ವನ್ನು ಹಮ್ಮಿಕೊಂಡಿವೆ.

ಈ ಸಮಾವೇಶದಲ್ಲಿ ಮಹಿಳೆ, ರೈತರು, ಯುವ ಹಾಗೂ ಕಾರ್ಮಿಕ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳಿಂದ 1500 ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದು ಹಾಗೂ ಬೇರೆಡೆಗೆ ವಿಸ್ತರಿಸುವ ಕುರಿತು ಚರ್ಚಿಸುವ ಉದ್ದೇಶದೊಂದಿಗೆ ಸಮಾವೇಶ ನಡೆಯುತ್ತಿದೆ.

ಸಮಾವೇಶದ ಭಾಗವಾಗಿ, ಉದ್ಘಾಟನಾ ದಿನವಾದ ಗುರುವಾರ ಮೂರು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಕೃಷಿ ಕಾರ್ಮಿಕರು, ಗ್ರಾಮೀಣ ವರ್ಗ, ಕೈಗಾರಿಕಾ ಕಾರ್ಮಿಕರು ಮತ್ತು ಬಡ ಮತ್ತು ಬುಡಕಟ್ಟು ಜನರಿಗೆ ಸಂಬಂಧಿಸಿದ ಗೋಷ್ಠಿಗಳನ್ನು ಆಯೋಜಿಸಲಾಗಿದೆ.

ADVERTISEMENT

ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಎಂಎಸ್‌ಪಿಗೆ ಕಾನೂನು ಖಾತರಿಗೊಳಿಸಬೇಕು, ‘ವಿದ್ಯುತ್ ಮಸೂದೆ –2021‘ ಅನ್ನು ರದ್ದುಗೊಳಿಸಬೇಕು ಮತ್ತು ವಾಯು ಗುಣಮಟ್ಟ ನಿರ್ವಹಣಾ ಆಯೋಗದ ಅಡಿಯಲ್ಲಿ ‘ಎನ್‌ಸಿಆರ್ ಮತ್ತು ಅಕ್ಕಪಕ್ಕದ ಪ್ರದೇಶಗಳ‘ ರೈತರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಬಾರದು ಎಂಬ ಪ್ರಮುಖ ಅಂಶಗಳನ್ನು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.