ADVERTISEMENT

ರೈತರು ಹಾರಿಸಿದ್ದು ಖಾಲಿಸ್ತಾನದ ಧ್ವಜವಲ್ಲ: ಹೋರಾಟಗಾರರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 18:06 IST
Last Updated 26 ಜನವರಿ 2021, 18:06 IST
ಭಾರತ ಧ್ವಜ ಇರುವ ಸ್ಥಳದಲ್ಲಿ ಸಿಖ್ಖರ ನಿಶಾನ್ ಸಾಹಿದ್ ಬಾವುಟ ಇರಿಸುತ್ತಿರುವ ಯುವಕ
ಭಾರತ ಧ್ವಜ ಇರುವ ಸ್ಥಳದಲ್ಲಿ ಸಿಖ್ಖರ ನಿಶಾನ್ ಸಾಹಿದ್ ಬಾವುಟ ಇರಿಸುತ್ತಿರುವ ಯುವಕ    

ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ರೈತರು, ಕೋಟೆಯ ಮೇಲೆ ಹಾರುತ್ತಿದ್ದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದರು. ಆ ಜಾಗದಲ್ಲಿ ಬೇರೊಂದು ಧ್ವಜವನ್ನು ಹಾರಿಸಿದರು. ಹಳದಿ-ನೀಲಿ ಬಣ್ಣದ, ತ್ರಿಕೋನಾಕೃತಿಯ ಈ ಧ್ವಜವನ್ನು ಮೂವರು ಯುವಕರು ಕೆಂಪು ಕೋಟೆಯ ಗುಮ್ಮಟದ ಮೇಲೆ ಹಾರಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತ್ರಿವರ್ಣ ಧ್ವಜವನ್ನು ಇಳಿಸುವ ಕೃತ್ಯವನ್ನು ರೈತರು ಎಸಗಬಾರದಿತ್ತು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಪ್ರತಿಭಟನೆನಿರತ ರೈತರು ಕೆಂಪುಕೋಟೆಯ ಮೇಲೆ ಹಾರಿಸಿದ ಬಾವುಟ ಯಾವುದು ಎಂದು ಹಲವರು ಪ್ರಶ್ನಿಸಿದ್ದಾರೆ. ಅದು ಖಾಲಿಸ್ತಾನದ ಬಾವುಟ. ಖಾಲಿಸ್ತಾನದ ಬಾವುಟ ಹಾರಿಸುವ ಮೂಲಕ ರೈತರು ದೇಶಕ್ಕೆ, ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಮಧ್ಯೆ ಖಾಲಿಸ್ತಾನ ಹೋರಾಟಗಾರರು ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದೂ ಹಲವರು ಆರೋಪಿಸಿದ್ದಾರೆ.

ಆದರೆ, ರೈತರು ಕೆಂಪುಕೋಟೆಯ ಮೇಲೆ ಹಾರಿಸಿದ್ದು ಖಾಲಿಸ್ತಾನದ ಬಾವುಟ ಅಲ್ಲ. ರೈತರು ಹಾರಿಸಿದ್ದು, ಸಿಖ್ಖರ ನಿಶಾನ್ ಸಾಹಿದ್ ಬಾವುಟ. ಎಲ್ಲಾ ಗುರುದ್ವಾರಗಳ ಎದುರು ಮತ್ತು ಗುಮ್ಮಟಗಳ ಮೇಲೆ ಈ ಧ್ವಜವನ್ನು ಹಾರಿಸಲಾಗುತ್ತದೆ. ಇದು ಸಿಖ್ಖರ ಧಾರ್ಮಿಕ ಬಾವುಟ. ತ್ರಿಕೋನಾಕೃತಿಯಲ್ಲಿ ಇರುವ ಈ ಧ್ವಜದ ಮಧ್ಯಭಾಗದಲ್ಲಿ ನಿಶಾನೆ (ಗುರಿ) ಚಿತ್ರವಿರುತ್ತದೆ. ಧ್ವಜದ ಕೆಳತುದಿಯಲ್ಲಿ ಒಂದು ಕುಚ್ಚು ಇರುತ್ತದೆ. ಧ್ವಜದ ಬಣ್ಣ ಹಳದಿಯಾಗಿದ್ದರೆ, ನಿಶಾನೆಯ ಬಣ್ಣ ನೀಲಿ ಆಗಿರುತ್ತದೆ. ಧ್ವಜದ ಬಣ್ಣ ನೀಲಿ ಆಗಿದ್ದರೆ, ನಿಶಾನೆಯ ಬಣ್ಣ ಹಳದಿ ಆಗಿರುತ್ತದೆ.

ADVERTISEMENT

ರೈತ ಸಂಘಟನೆಗಳೂ ಇದನ್ನು ಸ್ಪಷ್ಟಪಡಿಸಿವೆ. ಹಲವು ಮಾಧ್ಯಮ ಸಂಸ್ಥೆಗಳು ಈ ಸಂಬಂಧ ಫ್ಯಾಕ್ಟ್‌ಚೆಕ್ ವರದಿ ಮಾಡಿವೆ. ಇದು ಖಾಲಿಸ್ತಾನದ ಧ್ವಜ ಅಲ್ಲ ಎಂಬುದನ್ನು ದೃಢಪಡಿಸಿವೆ.

ಖಾಲಿಸ್ತಾನದ ಧ್ವಜದ ಬಣ್ಣವೂ ಹಳದಿ. ಆದರೆ ಧ್ವಜವು ಆಯತಾಕಾರದಲ್ಲಿ ಇರುತ್ತದೆ. ಧ್ವಜದ ಮಧ್ಯಭಾಗದಲ್ಲಿ ನಿಶಾನೆ ಮತ್ತು ಸಿಂಹದ ಗುರುತು ಇರುತ್ತದೆ. ಜತೆಗೆ ಖಾಲಿಸ್ತಾನ ಎಂದು ಬರೆದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.