ADVERTISEMENT

ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯದೆ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ: ಟಿಕಾಯತ್

ಡೆಕ್ಕನ್ ಹೆರಾಲ್ಡ್
Published 22 ನವೆಂಬರ್ 2021, 5:54 IST
Last Updated 22 ನವೆಂಬರ್ 2021, 5:54 IST
ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್   

ಲಖನೌ: ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಂಪೂರ್ಣವಾಗಿ ಚರ್ಚೆಯಾಗುವುದು ಮತ್ತು ಅವುಗಳಿಗೆ ಪರಿಹಾರ ದೊರೆಯದ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಬಿಕೆಯು (ಭಾರತೀಯ ಕಿಸಾನ್ ಯೂನಿಯನ್) ಮುಖಂಡ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಉತ್ತರ ಪ್ರದೇಶದ ಲಖನೌದಲ್ಲಿ ರೈತರ ಮಹಾಪಂಚಾಯಿತಿ ನಡೆಯುತ್ತಿದ್ದು, ಇದಕ್ಕೂ ಮುನ್ನ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವಿಚಾರ ಇನ್ನೂ ಬಾಕಿ ಇದೆ. ವಿದ್ಯುತ್ ತಿದ್ದುಪಡಿ ಕಾಯ್ದೆ ವಿಚಾರವೂ ಚರ್ಚೆಯಾಗಬೇಕಿದೆ. ಈ ಎಲ್ಲ ವಿಚಾರಗಳ ಸಂಪೂರ್ಣ ಚರ್ಚೆಯಾಗುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಹೇಳಿದ್ದಾರೆ.

ADVERTISEMENT

ರೈತರ ಮಹಾಪಂಚಾಯಿತಿ ಅಂಗವಾಗಿ ನೂರಾರು ರೈತರು ಲಖನೌದಲ್ಲಿ ಸೇರಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಖಾತರಿ ಮತ್ತು ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಮಗನನ್ನು ಬಂಧಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ವರ್ಷವಿಡೀ ನಡೆದ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬದವರಿಗೆ ಪರಿಹಾರ, ರೈತರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ಆಗ್ರಹಿಸುವ ವಿಷಯಗಳೂ ಮಹಾಪಂಚಾಯಿತಿಯಲ್ಲಿ ಚರ್ಚೆಗೆ ಬರಲಿವೆ.

ನಮ್ಮ ಜತೆ ಮಾತುಕತೆ ಆರಂಭಿಸಿ ಎಂದು ಪ್ರತಿಭಟನಾನಿರತ ರೈತರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.