ADVERTISEMENT

ರೈತರಿಂದ ಉಪವಾಸ ಇಂದು: ಹೋರಾಟ ಮುಂದಿನ ಹಂತಕ್ಕೆ ಒಯ್ಯಲು ಕ್ರಮ

ಪಿಟಿಐ
Published 13 ಡಿಸೆಂಬರ್ 2020, 19:45 IST
Last Updated 13 ಡಿಸೆಂಬರ್ 2020, 19:45 IST
ಪ್ರತಿಭಟನಾನಿರತ ರೈತರು –ಪಿಟಿಐ ಚಿತ್ರ
ಪ್ರತಿಭಟನಾನಿರತ ರೈತರು –ಪಿಟಿಐ ಚಿತ್ರ   

ನವದೆಹಲಿ: ಹೊಸ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಸೋಮವಾರ (ಡಿ.14) ಇನ್ನಷ್ಟು ತೀವ್ರಗೊಳ್ಳಲಿದೆ. ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿವಿವಿಧ ರೈತ ಸಂಘಟನೆಗಳ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.

ಈ ನಡುವೆ, ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಹಾಗೂ ಸಚಿವ ಸೋಮ್‌ಪ್ರಕಾಶ್‌ ಅವರು ಗೃಹಸಚಿವ ಅಮಿತ್‌ ಶಾ ಅವರನ್ನುಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೃಹ ಸಚಿವರನ್ನು ಭೇಟಿ ಮಾಡಿದವರ ತಂಡದಲ್ಲಿ ಪಂಜಾಬ್‌ನ ಕೆಲವು ಮುಖಂಡರೂ ಇದ್ದರು. ಸಭೆಯಲ್ಲಿ ಚರ್ಚೆಯಾದ ವಿಷಯಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಪಂಜಾಬ್‌ ಮತ್ತು ಹರಿಯಾಣದ ನೂರಾರು ಮಹಿಳೆಯರು ಸಹ ದೆಹಲಿಗೆ ಬಂದು ಪ್ರತಿಭಟನಕಾರರ ಜತೆ ಸೇರಿಕೊಳ್ಳುತ್ತಿದ್ದಾರೆ. ‘ಕೃಷಿ ಲಿಂಗಾಧಾರಿತ ವೃತ್ತಿ ಅಲ್ಲ. ನಮ್ಮ ಮನೆಯ ಪುರುಷರು ಪ್ರತಿಭಟನೆ ನಡೆಸುತ್ತಿದ್ದರೆ, ನಾವು ಮನೆಯಲ್ಲೇ ಏಕೆ ಕುಳಿತಿರಬೇಕು’ ಎಂದು ದೆಹಲಿಯತ್ತ ಪ್ರಯಾಣ ಆರಂಭಿಸಿರುವ ಮಹಿಳೆಯೊಬ್ಬರು ಹೇಳಿದ್ದಾರೆ.

ADVERTISEMENT

8ರಿಂದ 5ರವರೆಗೆ ಉಪವಾಸ: ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ರೈತ ಸಂಘಟನೆಗಳ ಮುಖಂಡರೆಲ್ಲರೂ ಸೋಮವಾರ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯವರೆಗೆ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ರೈತ ಮುಖಂಡ ಗುರುನಾಮಸಿಂಗ್‌ ಛದುನಿ ತಿಳಿಸಿದ್ದಾರೆ.

ಪ್ರತಿಭಟನೆಯನ್ನು ತೀವ್ರಗೊಳಿಸುವುದರ ಭಾಗವಾಗಿ ಇದನ್ನು ಕೈಗೊಳ್ಳಲಾಗುತ್ತಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಎಂದಿನಂತೆ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ ಬೆಂಬಲ: ಸೋಮವಾರ ಇಡೀ ದಿನ ಉಪವಾಸವಿದ್ದು ರೈತರ ಹೋರಾಟಕ್ಕೆ ಬೆಂಬಲ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ. ‘ಕೇಂದ್ರ ಸರ್ಕಾರವು ದುರಹಂಕಾರವನ್ನು ತ್ಯಜಿಸಿ, ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು. ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಮಸೂದೆಯನ್ನು ಮಂಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.