ADVERTISEMENT

ಗಾಜಿಪುರದಲ್ಲಿ ಹೆಚ್ಚಿದ ರೈತರ ಜಮಾವಣೆ: ಭಾರಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 18:40 IST
Last Updated 30 ಜನವರಿ 2021, 18:40 IST
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಾಜಿಪುರ ಗಡಿಯಲ್ಲಿ ರೈತರು ಹಾಗೂ ಅವರ ಬೆಂಬಲಿಗರು ಶನಿವಾರ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ
ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯ ಗಾಜಿಪುರ ಗಡಿಯಲ್ಲಿ ರೈತರು ಹಾಗೂ ಅವರ ಬೆಂಬಲಿಗರು ಶನಿವಾರ ಪ್ರತಿಭಟನೆ ನಡೆಸಿದರು–ಪಿಟಿಐ ಚಿತ್ರ   

ನವದೆಹಲಿ: ಮೂರು ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ರೈತರ ಬೆಂಬಲ ಹೆಚ್ಚುತ್ತಿದೆ. ‘ಫೆಬ್ರುವರಿ 2ರ ವೇಳೆಗೆ ದಾಖಲೆ ಸಂಖ್ಯೆಯ ಪ್ರತಿಭಟನ ಕಾರರು ಸೇರುವ ನಿರೀಕ್ಷೆಯಿದೆ’ ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಶನಿವಾರ ಹೇಳಿದ್ದಾರೆ.

‘ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಉತ್ತರಾಖಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನಾ ಸ್ಥಳಗಳನ್ನು ತಲುಪುತ್ತಿದ್ದಾರೆ’ ಎಂದು ರಾಜೇವಾಲ್ ಹೇಳಿದ್ದಾರೆ.

‘ಚಳವಳಿ ಪ್ರಬಲವಾಗಿದೆ. ರೈತರ ಬೇಡಿಕೆ ಹಾಗೂ ಶಾಂತಿಯುತ ಪ್ರತಿಭಟನೆಗೆ ನಿರಂತರವಾಗಿ ಬೆಂಬಲ ಸಿಗುತ್ತಿದೆ. ಇದು ರಾಜಕೀಯ ಪ್ರತಿಭಟನೆ ಯಲ್ಲ. ಹೊಸ ರೀತಿಯ ಚಿಂತನೆಗಳನ್ನು ಹಂಚಿಕೊಳ್ಳುವವರಿಗೆ ಸ್ವಾಗತವಿದೆ. ಆದರೆ, ಕೊನೆಯವರೆಗೂ ಚಳವಳಿ ಯನ್ನು ಬೆಂಬಲಿಸುವವರು ಮಾತ್ರ ಬರಬಹುದು’ಎಂದು ಭಾರತೀಯ ಕಿಸಾನ್ ಯೂನಿಯನ್‌ನ ಮೀರಠ್ ವಲಯದ ಮುಖ್ಯಸ್ಥ ಪವನ್ ಖತಾನಾ ಹೇಳಿದರು.

ADVERTISEMENT

ಗಾಜಿಪುರ ಗಡಿಯಲ್ಲಿ ಸುಮಾರು 10 ಸಾವಿರ ಪ್ರತಿಭಟನಕಾರರು ಶನಿವಾರ ಸೇರಿದ್ದರು ಎಂದು ಅಂದಾಜಿಸಲಾಗಿದೆ. ಆದರೆ ಐದರಿಂದ ಆರು ಸಾವಿರ ಜನ ಮಾತ್ರ ಇದ್ದರು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಭದ್ರತೆ ಹೆಚ್ಚಳ

ಹಲವೆಡೆ ಪ್ರತಿಭಟನಾ ಸ್ಥಳಗಳಲ್ಲಿ ರೈತರು ಹೆಚ್ಚಾಗಿ ಜಮಾಯಿಸುತ್ತಿರುವ ಕಾರಣ ಅಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಗಾಜಿಪುರ ಗಡಿಯನ್ನು ಸಂಪರ್ಕಿಸುವ ರಸ್ತೆಯನ್ನು ಮುಚ್ಚಲಾಗಿದೆ.

ಪ್ರಸ್ತಾವ ಇನ್ನೂ ಜೀವಂತ

‘ಜನವರಿ 22ರಂದು ರೈತರ ಮುಂದೆ ಇಟ್ಟಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರವು ಈಗಲೂ ಬದ್ಧವಾಗಿದೆ. ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಒಂದು ಫೋನ್ ಕರೆ ಮಾಡಿದರೆ ಮಾತುಕತೆಯ ಸಮಯ ನಿಗದಿಯಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಶನಿವಾರ ಸರ್ವಪಕ್ಷ ಸಭೆ ಯಲ್ಲಿ ಮಾತನಾಡಿದ ಅವರು, ‘ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ರೈತರು ಯಾವಾಗ ಮಾತುಕತೆಗೆ ಬಂದರೂ ನಾವು ಸಿದ್ಧರಿದ್ದೇವೆ’ ಎಂದು ತಿಳಿಸಿದರು.

ಮೂರು ಕಾಯ್ದೆಗಳನ್ನು 18 ತಿಂಗಳ ಕಾಲ ಅಮಾನತಿನಲ್ಲಿಡಲು ಸಿದ್ಧ ಎಂದು ಸರ್ಕಾರ ಈ ಹಿಂದೆ ಹೇಳಿತ್ತು.

ಉಪವಾಸ ಸತ್ಯಾಗ್ರಹ

ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯನ್ನು ಪ್ರತಿಭಟನ ನಿರತ ರೈತರು ‘ಸದ್ಭಾವನಾ ದಿನ’ದ ರೂಪದಲ್ಲಿ ಇಡೀ ದಿನ ಉಪವಾಸ ಇರುವ ಮೂಲಕ ಆಚರಿಸಿದರು.

ಸಾಕ್ಷ್ಯ ಸಂಗ್ರಹ: ಗಣರಾಜ್ಯೋತ್ಸವ ದಂದು ಭುಗಿಲೆದ್ದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಶನಿವಾರ ಕೆಂಪುಕೋಟೆಗೆ ಭೇಟಿ ನೀಡಿತು. ದೆಹಲಿ ಪೊಲೀಸರ ಅಪರಾಧ ವಿಭಾಗವು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಅಪರಾಧಿಗಳನ್ನು ಗುರುತಿಸಲು ಹಲವಾರು ತಂಡಗಳನ್ನು ರಚಿಸಲಾಗಿದೆ.

ಇಂಟರ್ನೆಟ್ ಸ್ಥಗಿತ

ರೈತರು ಬೀಡುಬಿಟ್ಟಿರುವ ಟಿಕ್ರಿ, ಸಿಂಘು, ಗಾಜಿಪುರ ಗಡಿಪ್ರದೇಶ ಹಾಗೂ ಅವುಗಳಿಗೆ ಹೊಂದಿಕೊಂಡಿರುವ ಕೆಲವು ಪ್ರದೇಶಗಲ್ಲಿ ಭಾನುವಾರ (ಜ. 31) ರಾತ್ರಿ 11 ಗಂಟೆವರೆಗೆ ಅಂತರ್ಜಾಲ ಸ್ಥಗಿತಗೊಳಿಸಿ ಕೇಂದ್ರ ಗೃಹಸಚಿವಾಲಯ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.