ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದೆ. ಕಾಯ್ದೆಗಳನ್ನು ವಾಪಸ್ ಪಡೆಯುವುದಿಲ್ಲ ಎಂಬ ನಿಲುವಿಗೆ ಕೇಂದ್ರ ಸರ್ಕಾರವು ಅಂಟಿಕೊಂಡಿದ್ದರೆ, ರೈತರೂ ಪಟ್ಟು ಸಡಿಲಿಸಲು ಸಿದ್ಧರಿಲ್ಲ ಎಂದಿದ್ದಾರೆ.
ಈ ಮಧ್ಯೆ, ಮೂರು ಹೊಸ ಕೃಷಿ ಕಾಯ್ದೆಗಳು ದೇಶದ ರೈತರ ಜೀವನಮಟ್ಟ ಸುಧಾರಿಸುವಲ್ಲಿ ಪ್ರಾಮುಖ್ಯವಾದವು ಎಂದು ಬಿಜೆಪಿಯ ದೆಹಲಿ ಘಟಕದ ಹಿರಿಯ ನಾಯಕರು ಪ್ರತಿಪಾದಿಸಿದ್ದಾರೆ.
ಬಿಜೆಪಿಯ ದೆಹಲಿ ಘಟಕದ ‘ಕಿಸಾನ್ ಮೋರ್ಚಾ’ ಆಯೋಜಿಸಿದ್ದ ‘ಕಿಸಾನ್ ಪಂಚಾಯತ್’ನಲ್ಲಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅದೇಶ್ ಗುಪ್ತ, ದೆಹಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ರಾಮ್‌ವೀರ್ ಸಿಂಗ್ ಬಿಧುರಿ, ಪಶ್ಚಿಮ ದೆಹಲಿ ಸಂಸದ ಪರ್ವೇಶ್ ವರ್ಮಾ ಭಾಗವಹಿಸಿ ರೈತರ ಜೊತೆ ಸಂವಾದ ನಡೆಸಿದ್ದಾರೆ. ಹೊಸ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ಯತ್ನಿಸಿದ್ದಾರೆ.
‘ಪ್ರತಿಪಕ್ಷಗಳಿಗೆ ಚುನಾವಣೆ ಸೋಲಿನ ಹತಾಶೆ’: ಚುನಾವಣೆಗಳಲ್ಲಿ ಸತತವಾಗಿ ಸೋಲುತ್ತಿರುವ ಪ್ರತಿಪಕ್ಷಗಳು ಕೃಷಿ ಕಾಯ್ದೆಗಳ ವಿರುದ್ಧ ಒಗ್ಗಟ್ಟಾಗಿವೆ ಎಂದು ಉತ್ತರಪ್ರದೇಶದ ಸಹಕಾರ ಸಚಿವ ಮುಕುತ್ ಬಿಹಾರಿ ವರ್ಮಾ ಟೀಕಿಸಿದ್ದಾರೆ.
ಕೃಷಿ ಕಾಯ್ದೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ಬಿಜೆಪಿಯು ಅಮೇಠಿಯ ಟೀಕರ್‌ಮಾಫಿಯಲ್ಲಿ ಆಯೋಜಿಸಿದ್ದ ಕಿಸಾನ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಹೋರಾಟ ನಡೆಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬುದು ವಿರೋಧಪಕ್ಷಗಳ ಕೆಲವು ಮುಖಂಡರು ಮತ್ತು ಕೆಲ ರೈತ ನಾಯಕರಿಗೆ ಮನವರಿಕೆಯಾಗಿದೆ. ಅದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.