ADVERTISEMENT

ರೈತರ ಪ್ರತಿಭಟನೆ: ಸರ್ಕಾರ ಆಹ್ವಾನಿಸಿದರೆ ನಾವು ಮಾತುಕತೆಗೆ ಸಿದ್ಧ- ಟಿಕಾಯತ್

ಪಿಟಿಐ
Published 12 ಏಪ್ರಿಲ್ 2021, 5:42 IST
Last Updated 12 ಏಪ್ರಿಲ್ 2021, 5:42 IST
ರಾಕೇಶ್‌ ಟಿಕಾಯತ್
ರಾಕೇಶ್‌ ಟಿಕಾಯತ್   

ಗಾಜಿಯಾಬಾದ್‌: ‘ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ಮಾತುಕತೆ ಆಹ್ವಾನಿಸಿದರೆ, ನಾವು ಅದಕ್ಕೆ ಸಿದ್ಧರಿದ್ದೇವೆ’ ಎಂದು ಬಿಕೆಯು ನಾಯಕ ರಾಕೇಶ್‌ ಟಿಕಾಯತ್ ಅವರು ತಿಳಿಸಿದ್ದಾರೆ.

‘ದೆಹಲಿ ಗಡಿ ಪ್ರದೇಶಗಳಾದ ಸಿಂಘು, ತಿಕ್ರಿ ಮತ್ತು ಗಾಜಿಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರತಿನಿಧಿಸುವ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಂಘಟನೆಯನ್ನು ಸರ್ಕಾರವು ಮಾತುಕತೆಗೆ ಆಹ್ವಾನಿಸಬೇಕು. ಹಾಗಿದ್ದಲ್ಲಿ ಮಾತ್ರ ಸರ್ಕಾರದೊಂದಿಗಿನ ಮಾತುಕತೆಯು ಪುನರಾರಂಭಗೊಳ್ಳಲಿದೆ’ ಎಂದು ಅವರು ಹೇಳಿದ್ದಾರೆ.

‘ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು’ ಎಂಬ ನಮ್ಮ ಬೇಡಿಕೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಜನವರಿ 22ರಂದು ಮಾತುಕತೆ ಆಗಿತ್ತು. ಪುನಃ ಆ ಹಂತದಿಂದಲೇ ಮಾತುಕತೆಪುನರಾರಂಭಗೊಳಿಸಬೇಕು ಎಂದುಬಿಕೆಯು ರಾಷ್ಟ್ರೀಯ ವಕ್ತಾರ ಧರ್ಮೇಂದ್ರ ಮಲಿಕ್ ಅವರು ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ದೇಶದಲ್ಲಿ ಕೊರೊನಾ ಭೀತಿ ಹೆಚ್ಚುತ್ತಿದೆ. ಹಾಗಾಗಿ ಪ್ರತಿಭಟನೆ ನಿರತ ರೈತರೊಂದಿಗೆ ಮಾತುಕತೆಯನ್ನು ಮುಂದುವರಿಸಿ’ ಎಂದು ಹರಿಯಾಣದ ಗೃಹ ಸಚಿವ ಅನಿಲ್ ವಿಜ್‌ ಅವರು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ಬಿಕೆಯು ಈ ಹೇಳಿಕೆಯನ್ನು ಬಿಡುಗಡೆ ಮಾಡಿದೆ.

‘ಕೊರೊನಾ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ. ಹರಿಯಾಣದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ನನಗೆ ದೆಹಲಿಯ ಗಡಿಪ್ರದೇಶದಲ್ಲಿ ಪ್ರತಿಭಟಿಸುತ್ತಿರುವ ರೈತರ ಬಗ್ಗೆ ಚಿಂತೆಯಾಗುತ್ತಿದೆ’ ಎಂದು ಅನಿಲ್‌ ವಿಜ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.